ADVERTISEMENT

ರಾಜ್ಯಕ್ಕೆ ಚಿಕ್ಕಾಸು; ಮಿತ್ರರಿಗೆ ನಿಧಿ: ಆಂಧ್ರ–ಬಿಹಾರಕ್ಕೆ ಭಾರಿ ಅನುದಾನ

ಮಂಜುನಾಥ್ ಹೆಬ್ಬಾರ್‌
Published 20 ಜನವರಿ 2026, 0:30 IST
Last Updated 20 ಜನವರಿ 2026, 0:30 IST
<div class="paragraphs"><p>ಅನುದಾನ (ಸಾಂರ್ಭಿಕ ಚಿತ್ರ)</p></div>

ಅನುದಾನ (ಸಾಂರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ನವದೆಹಲಿ: ‌ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕಿದ್ದು ಚಿಕ್ಕಾಸು. ಸರ್ಕಾರಕ್ಕೆ ಊರುಗೋಲು ಆಗಿರುವ ಮಿತ್ರರ ಸರ್ಕಾರ ಇರುವ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಕೇಂದ್ರ ಸರ್ಕಾರ ಭರಪೂರ ಅನುದಾನ ನೀಡಿದೆ. ಕೇಂದ್ರ ಸರ್ಕಾರವು ಸಚಿವ ಸಂಪುಟದ ನಿರ್ಧಾರಗಳ ಮೂಲಕ ಈ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತಲಾ ₹1 ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟಿದೆ.

ADVERTISEMENT

ಕಳೆದ 17 ತಿಂಗಳುಗಳಲ್ಲಿ ಕೇಂದ್ರ ಸಚಿವ ಸಂಪುಟವು ರಾಜ್ಯದ ಎರಡು ಯೋಜನೆಗಳಿಗಷ್ಟೇ ಅನುಮೋದನೆ ಕೊಟ್ಟಿದೆ. ₹3,432 ಕೋಟಿ ಮೊತ್ತದ ಬಳ್ಳಾರಿ–ಚಿಕ್ಕಜಾಜೂರು ರೈಲು ಮಾರ್ಗ ಹಾಗೂ ಬೆಂಗಳೂರಿನ ನಮ್ಮ ಮೆಟ್ರೊ ಮೂರನೇ ಹಂತದ ಯೋಜನೆಗೆ ಕೇಂದ್ರದಿಂದ ಹಸಿರು ನಿಶಾನೆ ಸಿಕ್ಕಿದೆ. ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದ 19 ತಿಂಗಳುಗಳು ಕಳೆದ ಬಳಿಕವಷ್ಟೇ ಮೆಟ್ರೊ ಯೋಜನೆಗೆ ಅನುಮತಿ ನೀಡಿತ್ತು. ಇದರಲ್ಲಿ ಕೇಂದ್ರದ ಪಾಲು ಶೇ 20ರಷ್ಟು. 

ಮಿತ್ರ ಪಕ್ಷವನ್ನು ಸಂತೃಪ್ತಿಪಡಿಸಲು ಕೇಂದ್ರವು ಆಂಧ್ರ ಪ್ರದೇಶಕ್ಕೆ  ಮೊಗೆ ಮೊಗೆದು ಯೋಜನೆಗಳನ್ನು ನೀಡಿದೆ. ಆಂಧ್ರ ಪ್ರದೇಶದಲ್ಲಿ 2025ರ ಜನವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘2024ರ ಜೂನ್‌ನಿಂದ ಇಲ್ಲಿಯವರೆಗೆ ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರವು ₹3 ಲಕ್ಷ ಕೋಟಿ ಆರ್ಥಿಕ ಸಹಾಯ ನೀಡಿದೆ’ ಎಂದು ಹೇಳಿಕೊಂಡಿದ್ದರು. ಸಚಿವರ ಈ ಮಾತೇ ನೆರೆ ರಾಜ್ಯದ ಮೇಲಿನ ಪ್ರೀತಿಗೆ ಸಾಕ್ಷಿ. ಇದರಲ್ಲಿ ತೆರಿಗೆ ಪಾಲು, ಸಹಾಯಾನುದಾನ ಹಾಗೂ ಕೇಂದ್ರದ ಪ್ರಾಯೋಜಿತ ಯೋಜನೆಗಳು ಸೇರಿಲ್ಲ. ಮತ್ತೊಂದೆಡೆ, ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಹಾಗೂ ಚಂದ್ರಬಾಬು ನಾಯ್ಡು ಅವರ ಚತುರ ನಡೆಯಿಂದಾಗಿ ಗೂಗಲ್‌ನ ಎಐ ಡೇಟಾ ಸೆಂಟರ್‌ ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗಲಿದೆ. ₹87,250 ಕೋಟಿ ಮೊತ್ತದ ಈ ಕೇಂದ್ರ ಸ್ಥಾಪನೆಗಾಗಿ ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 

ಕರ್ನಾಟಕದ 24 ಇಲಾಖೆಗಳ ಪ್ರಸ್ತಾವಗಳು ಅನುದಾನಕ್ಕಾಗಿ ಹಾಗೂ ಅನುಮೋದನೆಗಾಗಿ ವರ್ಷಗಳಿಂದ ಕೇಂದ್ರದ ವಿವಿಧ ಸಚಿವಾಲಯಗಳ ಮುಂದೆ ಇವೆ. ಈ ಪ್ರಸ್ತಾವಗಳಿಗೆ ಸಚಿವಾಲಯಗಳು ನೂರಾರು ಬಾರಿ ತಕರಾರುಗಳನ್ನು ಎತ್ತಿವೆ. ರಾಜ್ಯದ ಇಲಾಖೆಗಳು ಉತ್ತರವನ್ನೂ ಕೊಟ್ಟಿವೆ. ಇವುಗಳಲ್ಲಿ ಒಂದೇ ಒಂದು ಪ್ರಸ್ತಾವಕ್ಕೂ ಇತ್ತೀಚೆಗೆ ಅನುಮೋದನೆ ಸಿಕ್ಕಿಲ್ಲ. ವಿಶೇಷವೆಂದರೆ, ಎನ್‌ಡಿಎ ಮೈತ್ರಿಕೂಟದಲ್ಲಿ ಆಂಧ್ರದ ಟಿಡಿಪಿ, ಬಿಹಾರದ ಜೆಡಿಯು ಹಾಗೂ ಕರ್ನಾಟಕದ ಜೆಡಿಎಸ್‌ ಪಾಲುದಾರರು. 

ರಾಜ್ಯದಿಂದಲೂ ಲೋಪ: ರಾಜ್ಯದ ಬೇಡಿಕೆಗಳಿಗೆ ಕೇಂದ್ರ ಮನ್ನಣೆ ನೀಡದಿರಲು ರಾಜ್ಯದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಲೋಪದ ಪಾಲು ಇದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇಲಾಖಾ ಸಚಿವರು ಮನವಿ ಸಲ್ಲಿಸಿ ಹೋಗುತ್ತಾರೆ. ಆ ಪ್ರಸ್ತಾವಗಳನ್ನು ಬೆನ್ನು ಹತ್ತಬೇಕಾದವರು ದೆಹಲಿ ಕರ್ನಾಟಕ ಭವನದ ಅಧಿಕಾರಿಗಳು. ಅವರು ಕೇಂದ್ರದೊಂದಿಗೆ ಸಮನ್ವಯ ಸಾಧಿಸುತ್ತಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನು ನಿವಾಸಿ ಆಯುಕ್ತರು ಹಾಗೂ ಸಹಾಯಕ ನಿವಾಸಿ ಆಯುಕ್ತರು ಭೇಟಿ ಮಾಡಿದ್ದು ಅಪರೂಪ. ಜತೆಗೆ, ಸಂಸದರ ಸಭೆ ಹೊರತುಪಡಿಸಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಭೇಟಿಯೇ ಆಗಿಲ್ಲ.

‘ವಿಐಎಸ್‌ಎಲ್‌’ಗೊಂದು ನ್ಯಾಯ  

ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರವು ಕಳೆದ ವರ್ಷವೇ ಬಹುದೊಡ್ಡ ಪ್ಯಾಕೇಜ್‌ ಘೋಷಿಸಿದೆ. ಆದರೆ, ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಯ (ವಿಐಎಸ್‌ಎಲ್) ವಿಷಯದಲ್ಲಿ ಧಾರಾಳಿಯಾಗಿಲ್ಲ. ಕಾರ್ಖಾನೆಯ ಪುನಶ್ಚೇತನಕ್ಕೆ ₹4,000 ಕೋಟಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಹಲವು ತಿಂಗಳು ಕಳೆದಿವೆ.

ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರು ಉಕ್ಕು ಖಾತೆಗೆ ಸಂಪುಟ ದರ್ಜೆ ಸಚಿವರಾಗಿದ್ದರೆ, ಆಂಧ್ರದ ಭೂಪತಿರಾಜು ಶ್ರೀನಿವಾಸ ವರ್ಮ ರಾಜ್ಯ ಸಚಿವರು. ವಿಐಎಸ್‌ಎಲ್‌ ಪುನರುಜ್ಜೀವನಕ್ಕಾಗಿ ಕುಮಾರಸ್ವಾಮಿ ಶತಪ್ರಯತ್ನ ನಡೆಸಿದರೂ ಇಲ್ಲಿಯವರೆಗೆ ಫಲ ಸಿಕ್ಕಿಲ್ಲ. ಕೇಂದ್ರ ಹಣಕಾಸು ಸಚಿವರು ‘ನಿರ್ಮಲ’ ಮನಸ್ಸಿನಿಂದ ಕಡತಕ್ಕೆ ಅಂಕಿತ ಹಾಕಿದರೆ ಕೆಲವು ತಿಂಗಳಲ್ಲಿ ಕನಸು ನನಸು ಆಗಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.