
ರಬಕವಿ ಬನಹಟ್ಟಿ/ಬೆಳಗಾವಿ: ‘ಶಾಸಕರನ್ನು ವಿದೇಶಿ ಪ್ರವಾಸಕ್ಕೆ ಕಳುಹಿಸಿ ಯಾರು, ಎಷ್ಟು ದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾವಣೆಯಂತೂ ನಿಶ್ಚಿತ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಪಕ್ಷದ ಶಾಸಕರಿಗೆ ವಿದೇಶಿ ಭಾಗ್ಯ ಕಲ್ಪಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಹತ್ಯೆಯಾದ ತಮ್ಮ ಪಕ್ಷದ ಕಾರ್ಯಕರ್ತೆಗೆ ಸಚಿವ ಜಮೀರ್ ಅಹ್ಮದ್ ₹25 ಲಕ್ಷ ಪರಿಹಾರ ಕೊಟ್ಟಿದ್ದರು. ಯಾವ ಹಣ ಎಂದು ಮುಂದೆ ಬಹಿರಂಗಪಡಿಸುವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಿಜೆಪಿಗೆ ಬಂದಿಲ್ಲ. ಮುಖಂಡರು ಮತ್ತು ಕಾರ್ಯಕರ್ತರ ಶಕ್ತಿ ಮೇಲೆ ಮುಂದಿನ ದಿಗಳಲ್ಲಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲಾಗುವುದು’ ಎಂದರು.
‘ಮುಖ್ಯಮಂತ್ರಿ ಅಥವಾ ಯಾವುದೇ ಸಚಿವರ ಅಕ್ರಮಗಳನ್ನೂ ಬಿಡುವುದಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿಲ್ಲ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೇಂದ್ರಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿರುವ ವಿರುದ್ಧವೂ ಧ್ವನಿ ಎತ್ತುತ್ತೇವೆ. ತಿಂಗಳ ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣ (₹5 ಸಾವಿರ ಕೋಟಿ) ಈವರೆಗೆ ಫಲಾನುಭವಿಗಳಿಗೆ ತಲುಪಿಲ್ಲ’ ಎಂದು ಟೀಕಿಸಿದರು.
‘ಗೃಹಲಕ್ಷ್ಮಿ ಯೋಜನೆಯ ₹5 ಸಾವಿರ ಕೋಟಿ ನಿಧಿಯನ್ನು ಕೆಲ ಚುನಾವಣೆಗಳಿಗೆ ಬಳಸಲಾಗಿದೆ ಎಂಬ ಅನುಮಾನವಿದೆ’ ಎಂದೂ ಆರೋಪಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟೆಂಡರ್ ಇಲ್ಲದೇ 10 ಸಾವಿರ ಟಿ.ವಿ ಖರೀದಿಸಿರುವ ಬಗ್ಗೆ ಮೃದು ಧೋರಣೆ ಪ್ರಶ್ನೆಯೇ ಇಲ್ಲ. ಸರ್ಕಾರದ ಎಲ್ಲ ಹಗರಣ ಬೀದಿಗೆ ಎಳೆಯುವುದು ಶತಸಿದ್ಧಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘2028ರ ವರೆಗೆ ಸಿದ್ದರಾಮಯ್ಯ ಅವರೇ ಸಿ.ಎಂ’
ಬಳ್ಳಾರಿ: ‘ಸಿದ್ದರಾಮಯ್ಯ ಅವರು 2028ರ ವರೆಗೆ ಸಿ.ಎಂ ಆಗಿ ಮುಂದುವರಿಯುವರು. ಆದರೂ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ’ ಎಂದು ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಗುರುವಾರ ಇಲ್ಲಿ ಪುನರುಚ್ಚರಿಸಿದರು. ‘ಸಿದ್ದರಾಮಯ್ಯ ಅವರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಷಯ. ಸಿದ್ದರಾಮಯ್ಯ ನಮ್ಮ ನಾಯಕರಾಗಿದ್ದಾರೆ. ಹೀಗಾಗಿ ಅವರ ಸಾರಥ್ಯದಲ್ಲೇ 2028ರ ಚುನಾವಣೆಗೆ ಹೋಗುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಶಿವಕುಮಾರ್‌ಗೆ ಶುಭ ಘಳಿಗೆ ಹತ್ತಿರವಾಗಿದೆ’
ಬೆಳಗಾವಿ: ‘ಡಿ.ಕೆ.ಶಿವಕುಮಾರ್ ಅವರಿಗೆ ಶುಭಗಳಿಗೆ ಈಗ ಹತ್ತಿರ ಬಂದಿದೆ ಎಂದು ಅನ್ನಿಸುತ್ತಿದೆ. ದೆಹಲಿಯಲ್ಲಿ ಪಕ್ಷದ ವರಿಷ್ಠರ ಜೊತೆ ಅವರ ಭೇಟಿ ಯಶಸ್ವಿಯಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇಲ್ಲಿ ಪ್ರತಿಕ್ರಿಯಿಸಿದರು.
‘ಚುನಾವಣೆಗೆ ಮುನ್ನವೇ ಡಿ.ಕೆ.ಶಿವಕುಮಾರ್ ಅವರು ಪಕ್ಷದಿಂದ 136 ಶಾಸಕರು ಆರಿಸಿಬರುತ್ತಾರೆ ಎಂದಿದ್ದರು. ಅಷ್ಟೊಂದು ಸಂಘಟನೆ ಸಿದ್ಧತೆ ಮಾಡಿದ್ದರು. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಮತ್ತು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತೀ ಬಯಕೆ ಆಗಿದೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ‘ಸಿದ್ದರಾಮಯ್ಯ ಅವರ ನೇತೃತ್ವದಲ್ಲೆ ನಾವು 2023ರಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಆದರೆ ಡಿ.ಕೆ.ಶಿವಕುಮಾರ್ ಅವರು ಎಂತಹ ಪರಿಸ್ಥಿತಿಯಲ್ಲಿ ಪಕ್ಷದ ಚುಕ್ಕಾಣಿ ಹಿಡಿದರು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಹೈಕಮಾಂಡ್‌ಗೆ ನಾವೆಲ್ಲರೂ ತಲೆಬಾಗಲೇಬೇಕು. ಪ್ರಸ್ತುತ ವಿದ್ಯಮಾನಕ್ಕೆ ತೆರೆ ಎಳೆಯಲು ದಿನಾಂಕ ನಿಗದಿ ಪಡಿಸುತ್ತಾರೆ. ಈಗಲೂ ರಾಜ್ಯ ಸಮೃದ್ಧವಾಗಿದೆ ಮುಂದೆಯೂ ಇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.