ADVERTISEMENT

ವಿಧಾನ ಪರಿಷತ್‌ | 4 ಸ್ಥಾನಗಳಿಗೆ ನಾಮನಿರ್ದೇಶನ: ಮೇಲ್ಮನೆಯಲ್ಲಿ ‘ಕೈ’ ಮೇಲುಗೈ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 0:11 IST
Last Updated 8 ಸೆಪ್ಟೆಂಬರ್ 2025, 0:11 IST
<div class="paragraphs"><p>ಕೆ. ಶಿವಕುಮಾರ್,&nbsp;ಆರತಿ ಕೃಷ್ಣ, ಎಸ್‌.ಎಫ್‌. ಜಕ್ಕಪ್ಪನವರ,&nbsp; ರಮೇಶ್‌ ಬಾಬು</p></div>

ಕೆ. ಶಿವಕುಮಾರ್, ಆರತಿ ಕೃಷ್ಣ, ಎಸ್‌.ಎಫ್‌. ಜಕ್ಕಪ್ಪನವರ,  ರಮೇಶ್‌ ಬಾಬು

   

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನ ಭರ್ತಿಯಾಗುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸಂಖ್ಯಾ ಬಲ 37ಕ್ಕೆ ಏರಿಕೆ ಆಗಿದೆ. ತನ್ಮೂಲಕ, ಮೇಲ್ಮನೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ವಿಧಾನ ಪರಿಷತ್‌ನಲ್ಲಿ ಬಹುಮತ ಇರಲಿಲ್ಲ. ಪರಿಷತ್‌ನಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಇದ್ದುದರಿಂದ ಸಭಾಪತಿ, ಉಪ ಸಭಾಪತಿ ಸ್ಥಾನಗಳು ಬಿಜೆಪಿ ಹಿಡಿತದಲ್ಲೇ ಇದ್ದವು. ಸಂಖ್ಯಾಬಲ ಇಲ್ಲದ ಕಾರಣಕ್ಕೆ, ರಾಜ್ಯ ಸರ್ಕಾರ ಮಂಡಿಸಿದ್ದ ಕೆಲವು ಮಸೂದೆಗಳು ಮತ ವಿಭಜನೆಯ ವೇಳೆ ಸೋಲು ಕಂಡಿದ್ದವು. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು, ಅನೇಕ ಮಸೂದೆಗಳನ್ನು ಸದನ ಸಮಿತಿಗೆ ಒಪ್ಪಿಸಲೇಬೇಕಾದ ಅನಿವಾರ್ಯಕ್ಕೂ ಸರ್ಕಾರ ಸಿಲುಕಿತ್ತು. ತಾವು ಆಕ್ಷೇಪ ವ್ಯಕ್ತಪಡಿಸಿದ್ದ ಮಸೂದೆಗಳು ಅಂಗೀಕಾರಗೊಳ್ಳದಂತೆ ಮಾಡುವಲ್ಲಿ ವಿರೋಧ ಪಕ್ಷಗಳು ಸಫಲವಾಗಿದ್ದುಂಟು.

ADVERTISEMENT

ನಾಲ್ಕು ಸ್ಥಾನಗಳ ನಾಮ ನಿರ್ದೇಶನಕ್ಕೆ ರಾಜ್ಯಪಾಲರು ಅಂಗೀಕಾರ ಹಾಕಿದ್ದರಿಂದಾಗಿ, ಪರಿಷತ್ತಿನಲ್ಲಿ ಈಗ ಕಾಂಗ್ರೆಸ್‌ ಏಕೈಕ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ–ಜೆಡಿಎಸ್‌ ಸೇರಿ 37 ಸದಸ್ಯರ ಬಲ ಹೊಂದಿವೆ. ಮೇಲ್ನೋಟಕ್ಕೆ ಸಮಬಲ ಎನಿಸುವಂತಿದ್ದರೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ತಮ್ಮ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿ ಮೇಲ್ಮನೆಯಲ್ಲಿದ್ದಾರೆ. ಹೀಗಾಗಿ, ಪರಿಷತ್ತಿನಲ್ಲಿ ಎದುರಿಸುತ್ತಿದ್ದ ಮುಜುಗರದಿಂದ ಪಾರಾಗುವ ದಾರಿ ಕಾಂಗ್ರೆಸ್‌ ಸಿಕ್ಕಂತಾಗಿದೆ. 

ಬಿಜೆಪಿಯಿಂದ ಆಯ್ಕೆ ಆಗಿರುವ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರನ್ನು ಪಟ್ಟದಿಂದ ಕೆಳಗಿಳಿಸಿ, ಪಕ್ಷದ ಸದಸ್ಯರನ್ನು ಆ ಸ್ಥಾನಗಳಲ್ಲಿ ಕುಳ್ಳಿರಿಸಲು ಕೂಡಾ ಕಾಂಗ್ರೆಸ್‌ಗೆ ಅವಕಾಶ ಸಿಕ್ಕಂತಾಗಿದೆ.

ಜಾತಿವಾರು ಲೆಕ್ಕಾಚಾರ:

ನಾಮನಿರ್ದೇಶನಗೊಂಡಿರುವ ನಾಲ್ವರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ ಸಮುದಾಯದವರು. ಅವರು ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ. ಎಐಸಿಸಿ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಬಲಿಜ ಸಮುದಾಯದವರಾದ ರಮೇಶ್ ಬಾಬು, ಈ ಹಿಂದೆ ಜೆಡಿಎಸ್‌ನಲ್ಲಿದ್ದು, ಪರಿಷತ್ ಸದಸ್ಯರಾಗಿದ್ದರು. ನಂತರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ, ಪಕ್ಷದ ವಕ್ತಾರರಾಗಿ ಸಕ್ರಿಯರಾಗಿದ್ದಾರೆ. ಪರಿಶಿಷ್ಟ ಜಾತಿಯ (ಎಡಗೈ) ಸಮುದಾಯಕ್ಕೆ ಸೇರಿದವರಾದ ಜಕ್ಕಪ್ಪನವರ್, ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಘಟಕದ ಅಧ್ಯಕ್ಷರಾಗಿ ಮತ್ತು ಕಾರ್ಮಿಕ ಸಂಘಟನೆ ನಾಯಕರಾಗಿ ಕೆಲಸ ಮಾಡಿದ್ದಾರೆ. ಪರಿಶಿಷ್ಟ ಜಾತಿಯ (ಬಲಗೈ) ಸಮುದಾಯಕ್ಕೆ ಸೇರಿದ, ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು.

ಯಾರು ನಾಮ ನಿರ್ದೇಶನ?
ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಆರತಿ ಕೃಷ್ಣ ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಹುಬ್ಬಳ್ಳಿಯ ಎಫ್.ಎಚ್. ಜಕ್ಕಪ್ಪನವರ್ ಪತ್ರಕರ್ತ ಮೈಸೂರಿನ ಕೆ. ಶಿವಕುಮಾರ್‌ ಮತ್ತು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್‌ ಬಾಬು ಅವರನ್ನು ಕಾಂಗ್ರೆಸ್‌ ಪಕ್ಷ ನಾಮನಿರ್ದೇಶನ ಮಾಡಿದೆ. ರಮೇಶ್ ಬಾಬು ಅವರಿಗೆ 2026ರ ಜುಲೈ 21ರ ವರೆಗೆ ಉಳಿದವರಿಗೆ ಆರು ವರ್ಷ ಅವಕಾಶ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.