ADVERTISEMENT

ಕೋವಿಡ್ ಹೆಚ್ಚಳ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 8:44 IST
Last Updated 13 ಜನವರಿ 2022, 8:44 IST
ಮೇಕೆದಾಟು ಪಾದಯಾತ್ರೆ ಸ್ಥಗಿತ
ಮೇಕೆದಾಟು ಪಾದಯಾತ್ರೆ ಸ್ಥಗಿತ   

ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯು ಮೊಟಕುಗೊಂಡಿದೆ. ಕೊರೊನಾ ಆರ್ಭಟ ಮುಗಿದ ಬಳಿಕ ಇಲ್ಲಿಂದಲೇ ಮುಂದುವರಿಸಲು ನಿರ್ಧರಿಸಲಾಗಿದೆ.

ರಾಮನಗರ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷದ ನಾಯಕರ ಸಭೆಯ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ‌ ನಿರ್ಧಾರ ಪ್ರಕಟಿಸಿದರು. ನಾವು ಎರಡು ತಿಂಗಳ ಹಿಂದೆ ಪಾದಯಾತ್ರೆ ಘೋಷಿಸಿದಾಗ ಕೊರೊನಾ ಹಾವಳಿ ಇರಲಿಲ್ಲ. ಹೀಗಾಗಿ ಪಾದಯಾತ್ರೆ ಆರಂಭಿಸಿದೆವು. ಈಗ ಕೋವಿಡ್ ಸೋಂಕು‌‌ ಹೆಚ್ಚಾದ ಕಾರಣ ಇಲ್ಲಿಗೆ ನಿಲ್ಲಿಸುತ್ತಿದ್ದೇವೆ. ಮುಂದೆ ಇದೇ ನೆಲದಿಂದ ಮತ್ತೆ ಪಾದಯಾತ್ರೆ ಆರಂಭ ಆಗಲಿದೆ ಎಂದರು.

ನಮ್ಮ ಐತಿಹಾಸಿಕ ಹಿನ್ನೆಲೆಯುಳ್ಳ ರಾಜಕೀಯ ಪಕ್ಷ. ನಮಗೆ ನಮ್ಮದೇ ಆದ ಹಿನ್ನೆಲೆ ಇದೆ. ನಮ್ಮ ಜವಾಬ್ದಾರಿ ನಿರ್ವಹಿಸುತ್ತೇವೆ ಎಂದರು.

ADVERTISEMENT

ಸೋಂಕು ಹೆಚ್ಚಳಗೊಳ್ಳಲುಬಿಜೆಪಿ ಕಾರಣ:
ರಾಜ್ಯದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗಲು ಬಿಜೆಪಿ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ. ಬಿಜೆಪಿ ನಾಯಕರೇ ಹಲವಾರು ಕಾರ್ಯಕ್ರಮಗಳನ್ನು‌ ಮಾಡಿದರು. ಈಗ ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಮೇಕೆದಾಟು ಪಾದಯಾತ್ರೆ ಸಂಗಮದಿಂದ ಆರಂಭವಾಗಿತ್ತು. ಇವತ್ತು ರಾಮನಗರದಿಂದ ತೆರಳಬೇಕಿತ್ತು. ಕಾಂಗ್ರೆಸ್ ಬಹಳ ಹಳೆಯ ರಾಷ್ಟ್ರೀಯ ಪಕ್ಷ. ನಮಗೆ ಜವಾಬ್ದಾರಿ ಇದೆ. ರೋಗ (ಕೊರೊನಾ) ಮೂರನೇ ಅಲೆ ವೇಗವಾಗಿ ಹರಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಅಲ್ಲ, ಬಿಜೆಪಿಯೇ ನೇರ ಕಾರಣ.ಏನೇ ಇದ್ರೂ ಮುಖ್ಯಮಂತ್ರಿಯವರು ಯಾವುದೇ ಕಾರ್ಯಕ್ರಮ ನಿಲ್ಲಿಸಿಲ್ಲ.6ನೇ ತಾರೀಕು ಮೇಲ್ಮನೆಗೆ ಆಯ್ಕೆಯಾದ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ, ಮಂತ್ರಿಗಳು ಮುಂತಾದ ಎಲ್ಲರೂ ಭಾಗಿಯಾಗಿದ್ರು. ಆಗ ಯಾರೂ ಕಾಳಜಿ ವಹಿಸಲಿಲ್ಲ. ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಪ್ರತಿಭಟನೆ ಮಾಡಿದ್ರು, ರೇಣುಕಾಚಾರ್ಯ ಜಾತ್ರೆ ಮಾಡಿ ಮೆರವಣಿಗೆ ಮಾಡಿದ್ದರು. ಕೇಂದ್ರದ ಮಂತ್ರಿಗಳು ಎರಡನೇ ಅಲೆ ಇದ್ದಾಗ ಜನಾಶೀರ್ವಾದ ಯಾತ್ರೆ, ಸಭೆ ಎಲ್ಲ ಮಾಡಿದ್ರು. ಯಾರ ಅನುಮತಿಗಳನ್ನೂ ತೆಗೆದುಕೊಳ್ಳಲಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿಯೂ ಜಾತ್ರೆ ಮಾಡಿದ್ರು. ಒಬ್ರ ಮೇಲೂ ಕೇಸು ಹಾಕಲಿಲ್ಲ. ಆದರೆ ನಮ್ಮ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಎಫ್ಐಆರ್ ಸೇರಿಸಿ ಕೋರ್ಟಿಗೆ ಹಾಕಿದ್ದಾರೆ ಎಂದು ಹೇಳಿದರು.

ಸುಳ್ಳು ಮೊಕದ್ದಮೆ, ಪಾದಯಾತ್ರೆ ತಡೆಯುವುದೇ ಬಿಜೆಪಿ ಉದ್ದೇಶ...
ನಮ್ಮ ವಿರುದ್ಧ ಸುಳ್ಳು‌ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ. ನಮ್ಮ ಪಾದಯಾತ್ರೆಯನ್ನು‌ ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಅದಕ್ಕಾಗಿ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದರು. ಇದೆಲ್ಲದರ ಹೊರತಾಗಿಯೂ ನಮಗೆ ಜನರ ಹಿತ ಮುಖ್ಯ. ಕೋವಿಡ್ ಸಂಖ್ಯೆ 15 ಸಾವಿರಕ್ಕೆ ಏರಿಕೆ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಅಲ್ಲ. ದೇಶದಲ್ಲಿಯೇ ಈಗ ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಇದೆ ಎಂದರು.

ಜನರ ಹಿತದೃಷ್ಟಿಯಿಂದ ನಿರ್ಧಾರ:
ಕೇಸ್ ಹಾಕುತ್ತಾರೆ. ಇಲ್ಲವೇ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಪಾದಯಾತ್ರೆ ಹಿಂಪಡೆದಿಲ್ಲ. ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನು ಎರಡು ದಿನದಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ಇದೇ 19 ರಂದು ಸಮಾವೇಶ ನಡೆಸಲು ನಿರ್ಧರಿಸಿದ್ದೆವು. ಈಗ ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತಗೊಳಿಸಿದ್ದೇವೆ. ಮೂರನೇ ಅಲೆ ಕಡಿಮೆ ಆಗಿ, ನಿಯಮಾವಳಿ ಸಡಿಲ ಆದ ಮೇಲೆ ರಾಮನಗರದಿಂದ ಬೆಂಗಳೂರುವರೆಗೆ ಉಳಿದ ಏಳು ದಿನದ ಪಾದಯಾತ್ರೆ ಮುಂದುವರಿಯಲಿದೆ. ಕಾರ್ಯಕರ್ತರು‌ ಉತ್ಸಾಹ ಕಳೆದುಕೊಳ್ಳಬೇಡಿ. ಮತ್ತೆ ಪಾದಯಾತ್ರೆ ಮಾಡುತ್ತೇವೆ. ಆಗಲೂ ಎಂದಿನಂತೆ ನಿಮ್ಮ ಸಹಕಾರ ಬೇಕು ಎಂದರು.

ಸರ್ಕಾರಕ್ಕೆ ಹೆದರಿಲ್ಲ, ನಮಗೂ ಜವಾಬ್ದಾರಿ ಇದೆ...
ಇವರ (ಬಿಜೆಪಿ) ಉದ್ದೇಶ ಒಳ್ಳೆಯದಿಲ್ಲ. ಇಡೀ ಉದ್ದೇಶ ಪಾದಯಾತ್ರೆಯನ್ನು ಹೇಗಾದರೂ ಮಾಡಿ ನಿರ್ಬಂಧಿಸಬೇಕು ಎಂಬುದೇ ಅವರ ಉದ್ದೇಶ. ಅದಕ್ಕಾಗಿ ದಿನಕ್ಕೊಂದು ಆದೇಶವನ್ನು ಸರಕಾರವು ಡಿಸಿಗಳು, ಎಸ್ಪಿಗಳ ಮೂಲಕ ಹೊರಡಿಸಿದರು. ನೋಟೀಸುಗಳನ್ನು ಕೊಟ್ಟರು. ಆದರೆ ನಮಗೆ ಜನರ ಹಿತ ಬಹಳ ಮುಖ್ಯ. ನಿನ್ನೆ ಒಂದೇ ದಿನ 15 ಸಾವಿರ ರೋಗ ಪತ್ತೆಯಾಗಿದ್ರೆ, ಅದಕ್ಕೆ ನಮ್ಮ ಪಾದಯಾತ್ರೆ ಕಾರಣವಲ್ಲ. ಇಡೀ ದೇಶದಲ್ಲಿ, ಜಗತ್ತಿನಲ್ಲಿ ಸ್ವಾಭಾವಿಕವಾಗಿ ಮೂರನೇ ಅಲೆ ಇದೆ. ಇಲ್ಲೂ ಏರುತ್ತಾಇದೆ. ನಮಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೆ ನಮ್ಮ ಪಾದಯಾತ್ರೆಯಿಂದ ಕೊರೊನಾ ಸೋಂಕು ಉಲ್ಬಣವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಇದೆ. ಈ ಕಾರಣದಿಂದ, ನಾವಿವತ್ತು ಎಲ್ಲ ಚರ್ಚೆ ಮಾಡಿದ್ದೇವೆ. ಕೇಸು ಹಾಕ್ತಾರೆ ಅಂತ ಹೆದರಿ ಅಲ್ಲ, ಬಿಜೆಪಿ ಸರ್ಕಾರದ ಆದೇಶದಿಂದಾಗಿ ಅಲ್ಲ. ಜನರ ಆರೋಗ್ಯದ ದೃಷ್ಟಿಯಿಂದ, ನಾವು ಎಲ್ಲರೂ ರೋಗ ಉಲ್ಬಣಕ್ಕೆ ಕಾರಣಕರ್ತರು ಅಂತ ಜನರ ಮನಸ್ಸಿನಲ್ಲಿ ಬರಬಾರದೆಂಬ ಕಾರಣಕ್ಕೆ, ಜನರ ಹಿತದೃಷ್ಟಿಯಿಂದ ನಾವು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಬೆಂಗಳೂರಲ್ಲಿಯೂ ಸೋಂಕು ಜಾಸ್ತಿ ಇದೆ. ಅಲ್ಲೂ ಪಾದಯಾತ್ರೆ ಜ.19ರಂದು ಅಲ್ಲಿ ಸಮಾವೇಶ ಇತ್ತು. ಲಕ್ಷಾಂತರ ಜನ ಸೇರಿಬಿಡ್ತಿದ್ರು. ಈ ಹಿನ್ನೆಲೆಯಲ್ಲಿ, ನಾವಿವತ್ತು ಎಲ್ಲರೂ ಸುದೀರ್ಘವಾಗಿ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ, ಇವತ್ತು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಯಾರೂ ಉತ್ಸಾಹ ಕಳೆದುಕೊಳ್ಳಬೇಡಿ. ಈಗ ನಿಂತ ರಾಮನಗರದಿಂದಲೇ ಮತ್ತೆ ಆರಂಭವಾಗಲಿದೆ, ಎಲ್ಲಿ ನಿರ್ಧಾರ ಮಾಡಿದ್ದೇವೋ ಅಲ್ಲೇ ಮುಕ್ತಾಯವಾಗಲಿದೆ. ಕಾಂಗ್ರೆಸ್ ಪಕ್ಷ ಜನರ ಒಳಿತು ಬಯಸುವ ಪಕ್ಷ. ಈ ಕಾರಣದಿಂದ ನಾವು ಈ ಪಾದಯಾತ್ರೆ ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.