
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಪರಿಷತ್ ಸಭಾಪತಿ ಪೀಠದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು
ಬೆಂಗಳೂರು: ಕಾಂಗ್ರೆಸ್‌ನ ನಸೀರ್ ಅಹಮದ್, ಬಿಜೆಪಿಯ ಸಿ.ಟಿ.ರವಿ ಅವರು ಆಡಿದ ಮಾತುಗಳು ವಿಧಾನಪರಿಷತ್‌ನ ಇಡೀ ದಿನದ ಕಲಾಪವನ್ನು ವ್ಯರ್ಥ ಮಾಡಿದವು.
ಸೋಮವಾರದ ಕಲಾಪದಲ್ಲಿ ನಸೀರ್ ಅಹಮದ್ ಅವರು ಪ್ರಧಾನಿ ಕುರಿತು ಬಳಸಿದ ಪದಗಳು ಬಿಜೆಪಿಯವರ ಸಿಟ್ಟಿಗೆ ಕಾರಣವಾಗಿತ್ತು. ಮಂಗಳವಾರ ಕಲಾಪ ಆರಂಭವಾದಾಗ, ನಸೀರ್ ಅವರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಚರ್ಚೆಯ ವೇಳೆ ಸಿ.ಟಿ.ರವಿ ಅವರು ತಾವು ಆಡಿದ ಮಾತಿಗೆ ಕ್ಷಮೆ ಕೇಳಲು ನಿರಾಕರಿಸಿದ ಕಾರಣ ಕಾಂಗ್ರೆಸ್–ಬಿಜೆಪಿ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿತು. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಸದಸ್ಯರು ರವಿ ಬೆಂಬಲಕ್ಕೆ ನಿಂತರು. ಕ್ಷಮೆಯಾಚನೆಗೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಸಭಾಪತಿ ಪೀಠದಲ್ಲಿದ್ದ ಎಂ.ಕೆ.ಪ್ರಾಣೇಶ್ ಅವರ ಮಾತಿಗೂ ಸಿ.ಟಿ.ರವಿ ಜಗ್ಗಲಿಲ್ಲ. ಕೊನೆಗೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.
‘ನಸೀರ್ ಅಹಮದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಹೀಗೆ ಹೇಳುವ ನಾಲಗೆ ಭಾರತದ ನಾಲಗೆಯಂತೂ ಅಲ್ಲ ಎಂದಿದ್ದೇನೆ. ಅವರ ಹೆಸರನ್ನೂ ಉಲ್ಲೇಖಿಸಿಲ್ಲ. ಯಾವ ತಪ್ಪು ಮಾಡದೆ ಒತ್ತಡಕ್ಕೆ ವಿಷಾದ ವ್ಯಕ್ತಪಡಿಸುವುದು ಆತ್ಮವಂಚನೆಯಾಗುತ್ತದೆ. ಹಾಗಾಗಿ, ಕ್ಷಮೆ ಕೇಳುವುದಿಲ್ಲ’ ಎಂದು ಸಿ.ಟಿ.ರವಿ ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ನಸೀರ್ ವಿರುದ್ಧ ಬಿಜೆಪಿ ಧರಣಿ
ಕಲಾಪ ಆರಂಭವಾಗುತ್ತಲೇ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾಪತಿ ಅವರ ಪೀಠದ ಎದುರು ಬಂದು ಧರಣಿ ನಡೆಸಿದರು. ‘ಪ್ರಧಾನಿ ವಿರುದ್ಧ ಟೀಕೆ ಮಾಡಿರುವ ನಸೀರ್ ಅಹಮದ್ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಸಿ.ಟಿ.ರವಿ ಅವರು, ‘ಪ್ರಧಾನಿ ಕುರಿತಾಗಿ ಯಾವ ಭಾರತೀಯ ನಾಲಗೆಯೂ ಹೀಗೆ ಹೇಳುವುದಿಲ್ಲ. ಆ ನಾಲಗೆ ಯಾವುದು ಎಂಬುದನ್ನು ಪತ್ತೆ ಮಾಡಿ, ಅದು ನೆರೆಯ ದೇಶದ (ದೇಶದ ಹೆಸರನ್ನು ಕಡತದಿಂದ ತೆಗೆದುಹಾಕಲಾಯಿತು) ನಾಲಗೆ ಇರಬಹುದು’ ಎಂದು ಸಭಾಪತಿ ಅವರನ್ನು ಆಗ್ರಹಿಸಿದರು.
ಆಗ ಸಭಾಪತಿ ಹೊರಟ್ಟಿ ಅವರು, ಮಂಗಳವಾರ ನಸೀರ್ ಅವರು ಆಡಿದ್ದ ಮಾತನ್ನು ತರಿಸಿ ಓದಿದರು. ‘ಪ್ರಧಾನಿ ಕುರಿತಾಗಿ ಈ ರೀತಿಯ ಮಾತು ಆಡುವುದು ತರವಲ್ಲ. ಬೇಷರತ್ ಕ್ಷಮೆ ಕೇಳಿ’ ಎಂದು ಸೂಚಿಸಿದರು. ಈ ಬಗ್ಗೆ ವಿವರಣೆ ನೀಡಲು ನಸೀರ್ ಅವರು ಎದ್ದು ನಿಂತು, ‘ಪ್ರಚೋದನೆ ಮಾಡಿದ್ದರಿಂದಲೇ’ ಎನ್ನುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪ ಎತ್ತಿದರು.
‘ಬೇಷರತ್ ಕ್ಷಮೆ ಕೇಳಬೇಕು. ವಿವರಣೆಗೆ ಅವಕಾಶ ನೀಡಬಾರದು’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ವಿರೋಧ ಪಕ್ಷಗಳ ಸದಸ್ಯರು ದನಿಗೂಡಿಸಿದರು.
ಈ ಮಧ್ಯೆ ಮತ್ತೆ ಎದ್ದುನಿಂತ ನಸೀರ್, ‘ಸಿ.ಟಿ.ರವಿ ಅವರು ನೆರೆಯ ದೇಶದ ನಾಲಗೆ ಎಂದು ಹೇಳಿದ್ದಾರೆ. ನಾವೂ ಭಾರತೀಯರು. ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ನಮ್ಮ ಮನೆಯವರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲಿಗೆ ಹೋಗಿದ್ದಾರೆ. ರವಿ ಅವರ ಮಾತಿನಿಂದ ನೋವಾಗಿದೆ. ಅವರು ಕ್ಷಮೆ ಕೇಳಲಿ’ ಎಂದು ಹೊಸಪಟ್ಟು ಹಾಕಿದರು.
ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ‘ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ’ ಎಂದು ಪಟ್ಟು ಬಿಗಿಗೊಳಿಸಿದರು. ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು, ‘ಪದೇ–ಪದೇ ಪಾಕಿಸ್ತಾನದ ಹೆಸರು ಉಲ್ಲೇಖಿಸಿ ನಮ್ಮನ್ನು ಗುರಿ ಮಾಡುವುದು ಬಿಜೆಪಿಗೆ ಚಾಳಿಯಾಗಿಬಿಟ್ಟಿದೆ. ಅವರು ಕ್ಷಮೆ ಕೇಳಲೇಬೇಕು’ ಎಂದು ದನಿಗೂಡಿಸಿದರು.
ಈ ಹೊತ್ತಿಗೆ ಸದನದಲ್ಲಿ ಗದ್ದಲ ಹೆಚ್ಚಾಯಿತು. ಹೊರಟ್ಟಿ ಅವರು ಸದನವನ್ನು ಐದು ನಿಮಿಷ ಮುಂದೂಡಿ, ಸಭಾನಾಯಕ, ಸರ್ಕಾರದ ಮುಖ್ಯ ಸಚೇತಕ, ವಿರೋಧ ಪಕ್ಷದ ನಾಯಕ, ಸಚಿವ ಎಚ್.ಕೆ.ಪಾಟೀಲ, ನಸೀರ್ ಅಹಮದ್, ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ಕರೆದು ತಮ್ಮ ಕೊಠಡಿಯಲ್ಲಿ ಸಭೆ ನಡೆಸಿದರು. ಸುಮಾರು ಒಂದೂವರೆ ತಾಸಿನವರೆಗೂ ನಡೆದ ಸಭೆಯ ನಂತರ ಕಲಾಪ ಆರಂಭವಾಯಿತು. ಹೊರಟ್ಟಿ ಅವರ ಸೂಚನೆ ಮೇರೆಗೆ ನಸೀರ್ ಅವರು, ‘ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದರು. ಸಭಾಪತಿ ಸೂಚಿಸಿದರೂ ಸಿ.ಟಿ.ರವಿ ಅವರು ಕ್ಷಮೆ ಕೇಳಲು ನಿರಾಕರಿಸಿದರು.
ಸಿ.ಟಿ.ರವಿ ಅವರು ಯಾರನ್ನು ಉದ್ದೇಶಿಸಿ ಆ ಮಾತು ಹೇಳಿದ್ದಾರೆ ಎನ್ನುವುದು ನನಗೆ, ಸದನಕ್ಕೆ ಅರ್ಥವಾಗಿದೆ. ಅಂತಹ ಮಾತು ಆಡಬಾರದು. ಸದನದ ಕ್ಷಮೆ ಕೇಳಿದರೆ ಯಾರೂ ಸಣ್ಣವರಾಗುವುದಿಲ್ಲ.–ಬಸವರಾಜ ಹೊರಟ್ಟಿ,,ವಿಧಾನ ಪರಿಷತ್ ಸಭಾಪತಿ
ನೆಹರೂ, ಸಿಂಗ್ ದೇಶದ ಪ್ರಧಾನಿ ಆಗಿರಲಿಲ್ಲವೇ: ಸಂತೋಷ್ ಲಾಡ್
‘ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಬಾಯಿಗೆ ಬಂದಂತೆ ಟೀಕೆ ಮಾಡುವಾಗ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ದೇಶ ಪ್ರೇಮ ನೆನಪಾಗಲಿಲ್ಲವೇ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಅವರನ್ನು ಮೋದಿ ಅವರು ‘ಟೆರರಿಸ್ಟ್’ ಎಂದಿದ್ದರು. ನೆಹರೂ, ಇಂದಿರಾ, ರಾಜೀವ್ ಗಾಂಧಿ ಈ ದೇಶದ ಪ್ರಧಾನಿಗಳಾಗಿರಲಿಲ್ಲವೇ? ಅವರನ್ನು ಅಂದು, ಇಂದೂ ಟೀಕಿಸುತ್ತಲೇ ಇದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ವಿರುದ್ಧ ಬಿಜೆಪಿಗರು ಬಳಸುವ ಪದಗಳಿಗೆ ಕ್ಷಮೆಯೇ ಇಲ್ಲ. ಮೋದಿ ವಿರುದ್ಧದ ಟೀಕೆಗಳನ್ನು ಮಾತ್ರ ದೇಶದ್ರೋಹ ಎನ್ನುತ್ತಾರೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.