ADVERTISEMENT

ನಡೆಯದ ಕಲಾಪ: ಪರಿಷತ್ತಿನಲ್ಲಿ ರೌಡಿ, ಬಲತ್ಕಾರಿ... ಯಥೇಚ್ಛ ಪದ ಬಳಕೆ

ಪರಸ್ಪರ ಬೈದಾಡಿಕೊಂಡ ಆಡಳಿತ– ವಿಪಕ್ಷ ಸದಸ್ಯರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ವಿಧಾನ ಪರಿಷತ್ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ಸಚಿವ ತಿಮ್ಮಾಪುರೆ ರಾಜಿನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು</p></div>

ವಿಧಾನ ಪರಿಷತ್ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ಸಚಿವ ತಿಮ್ಮಾಪುರೆ ರಾಜಿನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು

   

ಬೆಂಗಳೂರು: ‘ದುಂಡಾವರ್ತಿ, ಗೂಂಡಾಗಿರಿ, ಅತ್ಯಾಚಾರ, ಪೋಕ್ಸೊ, ರೌಡಿ, ಬಲತ್ಕಾರಿ ಪಾರ್ಟಿ...’ ಇವುಗಳು  ವಿಧಾನ ಪರಿಷತ್ತಿನ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರು ಪರಸ್ಪರರನ್ನು ಬೈದುಕೊಂಡ ಪರಿ ಇದು.

ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯಪಾಲರಿಗೆ ಕಾಂಗ್ರೆಸ್‌ ಸದಸ್ಯರು ಅಡ್ಡಿಪಡಿಸಿದ ವಿಷಯ ಪ್ರಸ್ತಾಪಿಸಿದರು. ‘ನಮ್ಮ ಮನವಿಯನ್ನು ನಿಮಗೆ ನೀಡಿದ್ದೇವೆ. ಅದನ್ನು ಪರಿಗಣಿಸಿ’ ಎಂದು ಸಭಾಪ‍ತಿ ಅವರನ್ನು ಉದ್ದೇಶಿಸಿ ಹೇಳಿದರು.

ADVERTISEMENT

ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ನೀವು ಮೊದಲು ನೋಟಿಸ್‌ ನೀಡಿ, ಆನಂತರ ಪತ್ರ ನೀಡಿದ್ದೀರಿ. ಹೀಗಾಗಿ ನೋಟಿಸ್‌ ಅನ್ನು ಪರಿಗಣಿಸಲು ಸಾಧ್ಯವಿಲ್ಲ. ಪತ್ರದಲ್ಲಿರುವ ವಿಷಯವನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ಇದೇ ವೇಳೆ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಅವರು ಕ್ರಿಯಾಲೋಪ ಪ್ರಸ್ತಾಪಿಸಿದರು. ಆಗ ನಾರಾಯಣಸ್ವಾಮಿ ಅವರು, ‘ಈ ದುಂಡಾವರ್ತಿ ಇಲ್ಲಿ ನಡೆಯುವುದಿಲ್ಲ’ ಎಂದು ಕೂಗಿದರು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರೆಲ್ಲರೂ ಎದ್ದು ನಿಂತು, ‘ರೌಡಿ ಶಾಸಕರನ್ನು ಅಮಾನತು ಮಾಡಿ. ಅಲ್ಲಿಯವರೆಗೆ ಕಲಾಪ ನಡೆಯಲು ಬಿಡುವುದಿಲ್ಲ’ ಎಂದರು.

ಕಾಂಗ್ರೆಸ್‌ನ ಸದಸ್ಯರು, ‘ಸದನ, ಸಂವಿಧಾನ ಮತ್ತು ರಾಷ್ಟ್ರಗೀತೆಗೆ ರಾಜ್ಯಪಾಲರು ಅವಮಾನ ಮಾಡಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಈ ವೇಳೆಗೆ ಎರಡೂ ಕಡೆಯ ಎಲ್ಲ ಸದಸ್ಯರು ನಿಂತು ಪರಸ್ಪರ ಬೈದುಕೊಂಡರು.

ಛಲವಾದಿ ನಾರಾಯಣಸ್ವಾಮಿ ಅವರು, ‘ಈ ಗೂಂಡಾಗಿರಿಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ಹಾದಿ–ಬೀದಿ ಗೂಂಡಾಗಿರಿಯನ್ನು ಸದನಕ್ಕೂ ತಂದಿದ್ದಾರೆ. ಅಂತಹ ರೌಡಿ ಶಾಸಕರನ್ನು ಅಮಾನತು ಮಾಡಿ’ ಎಂದು ಪಟ್ಟುಹಿಡಿದರು. ಇದಕ್ಕೆ ಬಿಜೆಪಿ–ಜೆಡಿಎಸ್ ಸದಸ್ಯರು ದನಿಗೂಡಿಸಿದರು. ‘ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನೀವು ಪತ್ರದಲ್ಲಿ ಬರೆದಿಲ್ಲ. ಹೆಸರು ಬರೆದು ತಿಳಿಸಿ’ ಎಂದು ಸಭಾಪತಿ ಅವರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು.

ಬಿಜೆಪಿ ಸದಸ್ಯರು ಪದೇ–ಪದೇ ‘ಗೂಂಡಾಗಿರಿ’ ಎಂದು ಪ್ರಸ್ತಾಪಿಸಿದಕ್ಕೆ ಹರಿಪ್ರಸಾದ್‌ ಆಕ್ಷೇಪ ವ್ಯಕ್ತಪಡಿಸಿದರು. ‘ಗೂಂಡಾಗಿರಿ ಮಾಡುತ್ತಿರುವವರು ನೀವು. ಪೋಕ್ಸೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ತಡೆ ತಂದವರು ನೀವು. ತಲೆ ಮೇಲೆ ಆರ್‌ಎಸ್‌ಎಸ್‌ ಚಡ್ಡಿ ಹೊತ್ತವರು ನೀವು. ನಿಮ್ಮದು ಅತ್ಯಾಚಾರಿಗಳ, ಬಲತ್ಕಾರಿಗಳ ಪಕ್ಷ’ ಎಂದು ತಿರುಗೇಟು ನೀಡಿದರು.

ಈ ವೇಳೆಗೆ ಗದ್ದಲ ಜೋರಾಯಿತು. ಪದೇ ಪದೇ ತಾಕೀತು ಮಾಡಿದರೂ, ಸದಸ್ಯರು ಗದ್ದಲ ನಿಲ್ಲಿಸದ ಕಾರಣ ಸಭಾಪತಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು. ಆಡಳಿತ ಪಕ್ಷದ ಸದಸ್ಯರು ಸಭಾಪತಿ ಅವರ ಕೊಠಡಿಗೆ ತೆರಳಿ, ‘ರಾಜ್ಯಪಾಲರ ನಡೆಯ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಮನವಿ ಸಲ್ಲಿಸಿದರು. ವಿರೋಧ ಪಕ್ಷಗಳ ಸದಸ್ಯರು, ‘ಕಾಂಗ್ರೆಸ್‌ ಸದಸ್ಯರನ್ನು ಅಮಾನತು ಮಾಡಿ’ ಎಂದು ಮತ್ತೊಮ್ಮೆ ಮನವಿ ಸಲ್ಲಿಸಿದರು.

ಒಂದು ತಾಸಿನ ನಂತರ ಕಲಾಪ ಆರಂಭವಾಯಿತು. ಆಗಲೂ ಎರಡು ಕಡೆಯವರು ಪರಸ್ಪರ ಬೈದುಕೊಳ್ಳಲಾರಂಭಿಸಿದರು. ಈ ಮಾತುಗಳು ಯಾವುವೂ ಕಡತಕ್ಕೆ ಹೋಗಬಾರದು ಎಂದು ಸಭಾಪತಿ ಸೂಚಿಸಿದರು. ಕಾಂಗ್ರೆಸ್‌ನವರು, ‘ಗೋ ಬ್ಯಾಕ್‌ ಗವರ್ನರ್‌ (ರಾಜ್ಯಪಾಲರೆ, ವಾಪಸ್‌ ಹೋಗಿ)’ ಎಂದು ಘೋಷಣೆ ಕೂಗಿದರು. ಬಿಜೆಪಿ ಮತ್ತು ಜೆಡಿಎಸ್‌ನವರು, ‘ಕಾಂಗ್ರೆಸ್‌ಗೆ ಧಿಕ್ಕಾರ’ ಕೂಗಿದರು. ಗದ್ದಲ ತೀವ್ರವಾದ ಕಾರಣ ಸಭಾಪತಿ ಅವರು ಕಲಾಪ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.