ಬೆಂಗಳೂರು: ನಾಡಿನ ಕಲೆ, ಸಾಹಿತ್ಯ, ಭಾಷೆಗಳ ಪೋಷಣೆಗೆ ಸ್ಥಾಪಿತವಾದ ಸಾಂಸ್ಕೃತಿಕ ಅಕಾಡೆಮಿಗಳು ಅನುದಾನದ ಕೊರತೆ ಎದುರಿಸುತ್ತಿದ್ದು, ಈ ವರ್ಷವೂ ಅನುದಾನ ಹೆಚ್ಚಳದ ಭರವಸೆ ಸಾಕಾರವಾಗಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 14 ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ. ನಾಡು–ನುಡಿ, ಸಾಹಿತ್ಯ, ಸಂಸ್ಕೃತಿಯ ಜತೆಗೆ, ಸಂಗೀತ–ನೃತ್ಯ, ಲಲಿತಕಲೆ, ಜಾನಪದ, ನಾಟಕ, ಯಕ್ಷಗಾನ, ಬಯಲಾಟ, ಶಿಲ್ಪಕಲೆ ಮೊದಲಾದ ಕಲಾ ಪ್ರಕಾರಗಳ ವೈವಿಧ್ಯಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಅಕಾಡೆಮಿಗಳನ್ನು ಸ್ಥಾಪಿಸಲಾಗಿವೆ. ಇವುಗಳಿಗೆ ಅನುದಾನ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಈ ಬಾರಿಯೂ ಪ್ರಮುಖ ಅಕಾಡೆಮಿಗಳಿಗೆ ₹80 ಲಕ್ಷ ಹಾಗೂ ಭಾಷಾ ಅಕಾಡೆಮಿಗಳಿಗೆ ₹58 ಲಕ್ಷ ವಾರ್ಷಿಕ ಅನುದಾನ ಹಂಚಿಕೆ ಮಾಡಿದೆ.
14 ಅಕಾಡೆಮಿಗಳಿಗೆ ಒಟ್ಟಾರೆ ₹9.80 ಕೋಟಿ ನೀಡಿದ್ದು, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಅತ್ಯಂತ ಕಡಿಮೆ ಅನುದಾನ (₹54 ಲಕ್ಷ) ಒದಗಿಸಲಾಗಿದೆ. ವಾರ್ಷಿಕ ಅನುದಾನದಲ್ಲಿ ಅರ್ಧದಷ್ಟು ಹಣ ಸಿಬ್ಬಂದಿ ವೇತನ ಸೇರಿ ವಿವಿಧ ಆಡಳಿತಾತ್ಮಕ ವೆಚ್ಚಕ್ಕೆ ಬಳಕೆಯಾಗಲಿದೆ. ಇದರಿಂದಾಗಿ ಅಕಾಡೆಮಿಗಳು ಈ ವರ್ಷವೂ ಪುಸ್ತಕ ಪ್ರಕಟಣೆ, ಕಾರ್ಯಾಗಾರ, ಶಿಬಿರ, ಪ್ರಶಸ್ತಿ ಪ್ರದಾನದಂತಹ ಚಟುವಟಿಕೆಗಳಿಗೆ ಸೀಮಿತಗೊಳ್ಳಬೇಕಿದ್ದು, ಹೊಸ ಹಾಗೂ ದೀರ್ಘಾವಧಿ ಯೋಜನೆಗಳಿಗೆ ಅನುದಾನ ಇಲ್ಲವಾಗಿದೆ.
ಕೋವಿಡ್ ವೇಳೆ ಕಡಿತ: ಕೋವಿಡ್ ಸಂದರ್ಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸ್ತಬ್ಧವಾಗಿದ್ದ ಕಾರಣ, ಅಂದಿನ ಬಿಜೆಪಿ ಸರ್ಕಾರ ಅಕಾಡೆಮಿಗಳ ಅನುದಾನ ಕಡಿತ ಮಾಡಿತ್ತು. ಕೋವಿಡ್ ಪೂರ್ವದಲ್ಲಿ ಸಾಹಿತ್ಯ, ನಾಟಕ ಸೇರಿ ಪ್ರಮುಖ ಅಕಾಡೆಮಿಗಳಿಗೆ ₹1.5 ಕೋಟಿವರೆಗೂ ವಾರ್ಷಿಕ ಅನುದಾನ ನೀಡಲಾಗುತ್ತಿತ್ತು. 2022ರ ಅ.15ರಂದು ಅಕಾಡೆಮಿಗಳ ಹಿಂದಿನ ಕಾರ್ಯಕಾರಿ ಸಮಿತಿ ಅವಧಿ ಮುಕ್ತಾಯವಾಗಿತ್ತು. ಬಳಿಕ ಸುಮಾರು 15 ತಿಂಗಳು ಅಕಾಡೆಮಿಗಳಿಗೆ ಕಾರ್ಯಕಾರಿ ಸಮಿತಿ ಇರಲಿಲ್ಲ. ಇಲಾಖೆಯ ಜಂಟಿ ನಿರ್ದೇಶಕರೇ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
‘ಈಗ ನೀಡುತ್ತಿರುವ ಅನುದಾನದಲ್ಲಿ ದೀರ್ಘಾವಧಿ ಯೋಜನೆಗಳನ್ನು ರೂಪಿಸುವುದು ಕಷ್ಟಸಾಧ್ಯ. ವಾರ್ಷಿಕ ಕಾರ್ಯಚಟುವಟಿಕೆಗಳನ್ನು ಮಾತ್ರ ಮುಂದುವರಿಸಬೇಕಾಗಿದೆ. ಹೆಚ್ಚಿನ ಅನುದಾನ ದೊರೆತರೆ ವಿಶೇಷ ಯೋಜನೆಗಳನ್ನು ಕಾರ್ಯಗತ ಮಾಡಬಹುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಕಾಡೆಮಿ ಅಧ್ಯಕ್ಷರೊಬ್ಬರು ತಿಳಿಸಿದರು.
ಲಭ್ಯ ಅನುದಾನದ ಅನುಸಾರ ಅಕಾಡೆಮಿಗಳಿಗೆ ಸಹಾಯಧನ ಒದಗಿಸಲಾಗಿದೆ. ವಿಶೇಷ ಯೋಜನೆಗಳಿಗೆ ಅನುದಾನ ಅಗತ್ಯವಿದ್ದಲ್ಲಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದುಗಾಯಿತ್ರಿ ಕೆ.ಎಂ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ
ಅನುದಾನ ಹೆಚ್ಚಿಸಿದಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಸಾಕಾರ ಮಾಡಬಹುದು. ವಾರ್ಷಿಕ ಒಂದೂವರೆ ಕೋಟಿ ರೂಪಾಯಿ ಅನುದಾನವಾದರೂ ಅಗತ್ಯಕೆ.ವಿ. ನಾಗರಾಜಮೂರ್ತಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ
ಬಂಜಾರ ವಿಶ್ವಕೋಶ ವಿಶ್ವ ಸಮ್ಮೇಳನದಂತಹ ಯೋಜನೆ ನಡೆಸಬೇಕೆಂದು ಕಾರ್ಯಯೋಜನೆ ರೂಪಿಸಿದ್ದೆವು. ಹೆಚ್ಚಿನ ಅನುದಾನ ಒದಗಿಸಿದಲ್ಲಿ ಯೋಜನೆಗಳು ಸಾಕಾರವಾಗುತ್ತಿದ್ದವುಎ.ಆರ್. ಗೋವಿಂದಸ್ವಾಮಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ
ಮೂರು ವರ್ಷಗಳಿಂದ ಹೆಚ್ಚದ ಅನುದಾನ
ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2024ರ ಮಾರ್ಚ್‌ನಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚಿಸಿ ಆದೇಶ ಹೊರಡಿಸಿತ್ತು. ಅಕಾಡೆಮಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುದಾನ ಹೆಚ್ಚಿಸಬೇಕೆಂಬ ಆಗ್ರಹ ಸಾಂಸ್ಕೃತಿಕ ವಲಯದಲ್ಲಿ ವ್ಯಕ್ತವಾಗಿತ್ತು. ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಈ ವರ್ಷವೂ ಹಿಂದಿನ ವರ್ಷದಷ್ಟೇ ಅನುದಾನ ನೀಡಿದೆ. ಮೂರು ವರ್ಷಗಳಿಂದ ಅನುದಾನ ಹೆಚ್ಚಳವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.