ADVERTISEMENT

ಬಿಜೆಪಿಗೆ ಸೋಲುವ ಭೀತಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:38 IST
Last Updated 28 ಜನವರಿ 2023, 6:38 IST
   

ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ. ಅದ್ದರಿಂದಲೇ ರಾಜ್ಯದ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಬರುತ್ತಿದ್ದಾರೆ‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಈ ಬಾರಿ ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಸೋಲಿನ ಭಯ ಕಾಡುತ್ತಿರುವುದು ಕಾಂಗ್ರೆಸ್ಸಿಗಲ್ಲ, ಬಿಜೆಪಿಗೆ ಎಂದರು.

ಐದು ವರ್ಷಗಳಲ್ಲಿ ಬಡವರಿಗೆ ಒಂದಾದರೂ ಮನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ADVERTISEMENT

224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಬೇಕಿರುವುದರಿಂದ ನಾನು ಉತ್ತರ ಕರ್ನಾಟಕದಲ್ಲಿ, ಪಕ್ಷದ ಅಧ್ಯಕ್ಷ ‌ಡಿ.ಕೆ. ಶಿವಕುಮಾರ್ ಅವರು ದಕ್ಷಿಣ ಕರ್ನಾಟಕದಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಲಿದ್ದೇವೆ.‌ ಸಾಮೂಹಿಕವಾಗಿ ಎಲ್ಲ ಮುಖಂಡರನ್ನು ಒಳಗೊಂಡು ಸಂಚಾರ ನಡೆಸಲಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಈ ಬಾರಿ ಸೋಲುವುದು ಖಚಿತ. ಜನ ಚುನಾವಣೆ ಬರುವುದನ್ನೇ ಕಾಯುತ್ತಿದ್ದಾರೆ. ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ.

ಬಿಜೆಪಿಯವರು ಪಿಎಸ್ಐ ಹಗರಣದಲ್ಲಿ ಅಕ್ರಮವಾಗಿ ಎಷ್ಟು ಲೂಟಿ ಮಾಡಿದ್ದಾರೆ. ಅಂಕಗಳನ್ನು ಹೇಗೆ ತಿದ್ದಿದ್ದಾರೆ ಎಂಬುದನ್ನು 'ಪ್ರಜಾವಾಣಿ' ಎಳೆ ಎಳೆಯಾಗಿ ಬಿಚ್ಚಿಟ್ಟಿದೆ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ, ವಕ್ತಾರ ಪ್ರಿಯಾಂಕ್ ಖರ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.