ADVERTISEMENT

ಎಸ್ಕಾಂಗಳಿಗೆ ₹4,900 ಕೋಟಿ ಆದಾಯ ಖೋತಾ: ಏಪ್ರಿಲ್‌ಗೆ ಮತ್ತೆ ವಿದ್ಯುತ್‌ ದರ ಏರಿಕೆ

ಎ.ಎಂ.ಸುರೇಶ
Published 15 ಜನವರಿ 2026, 1:20 IST
Last Updated 15 ಜನವರಿ 2026, 1:20 IST
ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ   

ಬೆಂಗಳೂರು: ಐದು ವಿದ್ಯುತ್‌ ಸರಬರಾಜು ಕಂಪನಿಗಳ ಆದಾಯದಲ್ಲಿ ಖೋತಾ ಆಗಿದ್ದು, ಇದನ್ನು ಸರಿ ದೂಗಿಸಲು ಏಪ್ರಿಲ್‌ನಿಂದಲೇ ವಿದ್ಯುತ್‌ ದರ ಏರಿಸುವ ತಯಾರಿ ನಡೆದಿದೆ.

ವಿದ್ಯುತ್‌ ಸರಬರಾಜು ಕಂಪನಿ ಗಳು(ಎಸ್ಕಾಂ) 2024–25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿವೆ. ಎಸ್ಕಾಂಗಳ ಆದಾಯದಲ್ಲಿ ಸುಮಾರು ₹4,900 ಕೋಟಿಖೋತಾ ಆಗಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ದರ ಪರಿಷ್ಕರಣೆ ಮಾಡಿದಾಗ ಕೆಇಆರ್‌ಸಿ ಅಂದಾಜು ಮಾಡಿದ್ದ ಲೆಕ್ಕಾಚಾರದಲ್ಲಿ ವೆಚ್ಚ ಹೆಚ್ಚಾಗಿದ್ದರೆ, ಆದಾಯದಲ್ಲಿ ಖೋತಾ ಆಗಿದೆ. ಇದರ ನಡುವೆ ಸಮತೋಲನ ಕಾಪಾಡಲು ದರ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿವೆ. ಕಂಪನಿಗಳು ಸಲ್ಲಿಸಿರುವ ಪ್ರಸ್ತಾವದ ಬಗ್ಗೆ ಆಯೋಗವು ಪರಿಶೀಲನೆ ನಡೆಸಿ ದರ ಹೆಚ್ಚಳದ ಆದೇಶ ಹೊರಡಿಸಲಿದೆ.

ADVERTISEMENT

ಯಾವ, ಯಾವ ಬಾಬ್ತಿನಲ್ಲಿ ನಿಗದಿಗಿಂತ ಕಡಿಮೆ ಆದಾಯ ಸಂಗ್ರಹವಾಗಿದೆ. ಯಾವುದಕ್ಕೆ ನಿಗದಿಗಿಂತ ಅಧಿಕ ವೆಚ್ಚವಾಗಿದೆ ಎಂಬ ವಿವರಗಳು ವರದಿಯಲ್ಲಿದೆ. ಅದರ ಪ್ರಕಾರ ವಿದ್ಯುತ್‌ ಖರೀದಿ, ಬಡ್ಡಿ ಪಾವತಿ ಮತ್ತು ಹಣಕಾಸು ವೆಚ್ಚ, ಕಾರ್ಯಾಚರಣೆ ಮತ್ತು ನಿರ್ವಹಣೆ ಇತ್ಯಾದಿಗಳಿಗೆ ಕೆಇಆರ್‌ಸಿ ಅಂದಾಜಿಸಿದಕ್ಕಿಂತ ಅಧಿಕ ವೆಚ್ಚವಾಗಿದೆ ಎಂದು ತೋರಿಸಲಾಗಿದೆ.

ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ಪ್ರಕಾರ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) ಅತಿ ಹೆಚ್ಚು, ಅಂದರೆ ₹2,802.82 ಕೋಟಿ ಖೋತಾ ಆಗಿದೆ. ಉಳಿದೆಲ್ಲ ಎಸ್ಕಾಂಗಳ ಆದಾಯದಲ್ಲೂ ಎರಡು ಸಾವಿರ ಕೋಟಿಗೂ ಅಧಿಕ ಖೋತಾ ಆಗಿದೆ. ದರ ಪರಿಷ್ಕರಣೆ ಮಾಡದಿದ್ದರೆ ಕಂಪನಿಗಳ ನಿರ್ವಹಣೆ ಕಷ್ಟವಾಗಲಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ.

ಮರು ಪರಿಶೀಲನಾ ಅರ್ಜಿ: 2025ರ ಮಾರ್ಚ್‌ನಲ್ಲಿ ದರ ಪರಿಷ್ಕರಣೆ ಮಾಡಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಕೋರಿ ಎಸ್ಕಾಂಗಳು ಕೆಇಆರ್‌ಸಿಗೆ ಪ್ರತ್ಯೇಕ ಅರ್ಜಿಯನ್ನು ಈಗಾಗಲೇ ಸಲ್ಲಿಸಿವೆ. ಇದನ್ನು ವಿಚಾರಣೆಗೆ ಅಂಗೀಕರಿಸಿದ್ದು, ಸದ್ಯದಲ್ಲೇ ಸಾರ್ವಜನಿಕವಾಗಿ ಅಹವಾಲುಗಳನ್ನು ಆಲಿಸಿ, ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನಿಗದಿಪಡಿಸಿರುವ ವಿದ್ಯುತ್ ದರವನ್ನು ಜಾಸ್ತಿ ಮಾಡಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿಗದಿಪಡಿಸಿರುವ ದರವನ್ನು ಕಡಿಮೆ ಮಾಡಬೇಕು ಎಂಬುದು ಎಸ್ಕಾಂಗಳ ಬೇಡಿಕೆಯಾಗಿದೆ.

ಯಾಕೆ ಈ ಬೇಡಿಕೆ?: ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹6.80 ಇದ್ದ ದರವನ್ನು ಆಯೋಗವು ₹8.25ಕ್ಕೆ ಹೆಚ್ಚಿಸಿತ್ತು. ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ನೀಡುವ ಕಾರಣ, ಇದರ ವೆಚ್ಚವನ್ನು ಸಹಾಯಧನದ ರೂಪದಲ್ಲಿ ಸರ್ಕಾರ  ಎಸ್ಕಾಂಗಳಿಗೆ ತುಂಬಿಕೊಡಬೇಕು.

ಕಳೆದ ವರ್ಷ ದರ ಪರಿಷ್ಕರಣೆ ಆಗುವ ಮುನ್ನ ಸರ್ಕಾರ ಸುಮಾರು ₹18 ಸಾವಿರ ಕೋಟಿ ಸಹಾಯಧನಯನ್ನು ನೀಡುತ್ತಿತ್ತು. ಪರಿಷ್ಕರಣೆ ನಂತರ ಇದು ಸುಮಾರು ₹21 ಸಾವಿರ ಕೋಟಿಗೆ ಹೆಚ್ಚಾಗಿದೆ. ಇಷ್ಟೊಂದು ಹಣವನ್ನು ಸಹಾಯಧನ ರೂಪದಲ್ಲಿ ನೀಡುವುದು ಕಷ್ಟ ಎಂಬ ಕಾರಣಕ್ಕಾಗಿ ಸರ್ಕಾರದ ಸೂಚನೆಯಂತೆ ಎಸ್ಕಾಂಗಳು ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ಪಂಪ್‌ಸೆಟ್‌ಗಳಿಗೆ ಪೂರೈಕೆಯಾಗುವ ವಿದ್ಯುತ್‌ ದರವನ್ನು ಕಡಿಮೆ ಮಾಡಿ, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಇತ್ಯಾದಿಗಳಿಗೆ ಪೂರೈಸುವ ವಿದ್ಯುತ್‌ ದರವನ್ನು ಹೆಚ್ಚಿಸಬೇಕು ಎಂದು ಕೋರಲಾಗಿದೆ. ಇದನ್ನು ಕೆಇಆರ್‌ಸಿ ಒಪ್ಪಿದರೆ, ಸರ್ಕಾರಕ್ಕೆ ಸಹಾಯಧನ ರೂಪದಲ್ಲಿ ನೀಡುವ ಹಣ ಸ್ವಲ್ಪಮಟ್ಟಿಗೆ ಉಳಿಯಲಿದೆ. ಆದರೆ, ಕೈಗಾರಿಕೆಗಳು, ಕಾರ್ಖಾನೆಗಳಿಗೆ ಹೊರೆಯಾಗಲಿದೆ.

3 ವರ್ಷಕ್ಕೆ ಅನ್ವಯ: ಆದೇಶದ ಕತೆ ಏನು?

ಬಹುವಾರ್ಷಿಕ ದರ ಪದ್ಧತಿ ಕಳೆದ ವರ್ಷದಿಂದ ಜಾರಿಗೆ ಬಂದಿದ್ದು, 2028ರವರೆಗೆ ಇದೇ ದರ ಜಾರಿಯಲ್ಲಿರುತ್ತದೆ ಎಂದು ಕೆಇಆರ್‌ಸಿ ಹೇಳಿತ್ತು. 

ಅದರ ಪ್ರಕಾರ 2025–26, 2026–27 ಮತ್ತು 2027–2028ಕ್ಕೆ ಅನ್ವಯವಾಗುವಂತೆ ವಿದ್ಯುತ್‌ ದರ ನಿಗದಿ ಮಾಡಿ 2025ರಲ್ಲೇ ಆದೇಶ ಹೊರಡಿಸಲಾಗಿದೆ. ಕೆಇಆರ್‌ಸಿಯು ಮೂರು ವರ್ಷಗಳಿಗೆ ಅಂದಾಜು ಮಾಡಿದಕ್ಕಿಂತ ಹೆಚ್ಚಿನ ವೆಚ್ಚವಾಗುತ್ತಿದೆ. ಇದನ್ನು ಸರಿದೂಗಿಸಿಕೊಡಬೇಕು ಎಂಬುದು ಎಸ್ಕಾಂಗಳ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.