ADVERTISEMENT

ಬಾಗಲಕೋಟೆ | ಕೃಷ್ಣಾ–ಮಲಪ್ರಭಾ ಅಬ್ಬರ, ಕೈಮಗ್ಗದ ಸದ್ದಡಗಿಸಿ ಮೊರೆಯುತ್ತಿದೆ ಪ್ರವಾಹ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 13:19 IST
Last Updated 11 ಆಗಸ್ಟ್ 2019, 13:19 IST
   

ಬಾಗಲಕೋಟೆ: ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮ ಸ್ಥಾನ, ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮ ಪ್ರವಾಹದಿಂದ ತತ್ತರಿಸಿದೆ. ಐಕ್ಯಮಂಟಪ ಹಾಗೂ ಸಂಗಮೇಶ್ವರ ದೇಗುಲ ಸಮುಚ್ಚಯದಿಂದ ಒಂದು ಕಿ.ಮೀ ದೂರದವರೆಗೆ ಪ್ರವಾಹದ ನೀರು ವ್ಯಾಪಿಸಿದೆ.

ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಪ್ರವಾಹದ ಜೊತೆಗೆ ನಾರಾಯಣಪುರ ಜಲಾಶಯದ ಹಿನ್ನೀರು ವಿಸ್ತರಿಸಿರುವುದರಿಂದ ಕೂಡಲಸಂಗಮದಲ್ಲಿ ಸಂಕಷ್ಟ ಹೆಚ್ಚಾಗಿದೆ. ಕೂಡಲಸಂಗಮದಿಂದ ಚಿತ್ರದುರ್ಗ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 13 ಸಂಪರ್ಕಿಸುವ ಸಂಗಮ ಕ್ರಾಸ್ ರಸ್ತೆಯಲ್ಲಿ ಪ್ರವಾಹದ ನೀರು ವ್ಯಾಪಿಸಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ.

ಕೂಡಲಸಂಗಮಕ್ಕೆ ತೆರಳಲು ಕಳಸ ರಸ್ತೆಯ ಮೂಲಕ ಬಳಸು ಹಾದಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಪ್ರವಾಹ ಕಡಿಮೆ ಆಗುವವರೆಗೂ ದೇವಸ್ಥಾನ ಸಮುಚ್ಚಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆದೇಶಿಸಿದೆ.

ADVERTISEMENT

ಪಟ್ಟದಕಲ್ಲು ಜಲಾವೃತ:ಚಾಲುಕ್ಯರ ಕಾಲದ ವಾಸ್ತುಶಿಲ್ಪದ ತೊಟ್ಟಿಲು ಪಟ್ಟದಕಲ್ಲು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಪಟ್ಟಿಯಲ್ಲಿದೆ. ಜಾಗತಿಕ ಮಟ್ಟದ ಈ ಪ್ರವಾಸಿ ತಾಣ ಇದೀಗ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದೆ. ಸಮೀಪದ ಪಟ್ಟದಕಲ್ಲು ಗ್ರಾಮ ಕೂಡ ಜಲಾವೃತವಾಗಿದೆ. ಜಿಲ್ಲಾಡಳಿತವು ಈವರೆಗೆ ನಾಲ್ಕು ಬೋಟ್‌ಗಳ ಮೂಲಕ ಆನ್‌ಡಿಆರ್‌ಎಫ್‌ ತಂಡದ ಸಹಾಯದಿಂದ 274 ಮಂದಿಯನ್ನು ರಕ್ಷಿಸಿ, ಗಂಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿದೆ.

ಕಮತಗಿಯಲ್ಲಿ ಮಗ್ಗ ನಿಶ್ಯಬ್ದ:ಕೈಮಗ್ಗ ನೇಕಾರಿಕೆಗೆ ಹೆಸರಾದಹುನಗುಂದ ತಾಲ್ಲೂಕಿನ ಪುಟ್ಟ ಪಟ್ಟಣ ಕಮತಗಿಯೂ ಮಲಪ್ರಭಾ ಅಬ್ಬರಕ್ಕೆ ತತ್ತರಿಸಿದೆ.ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಗೆ ತಾಗಿಕೊಂಡಂತೆ ಇರುವ ಈ ಊರಿಗೆ ಪ್ರವಾಹದ ನೀರು ನುಗ್ಗಿ ಪೂರ್ಣ ವ್ಯಾಪಿಸಿದೆ. ಸದಾ ಮಗ್ಗದ ಸದ್ದು ಕೇಳುತ್ತಿದ್ದ ಈ ಊರನ್ನು ಕಳೆದ ಮೂರು ದಿನಗಳಿಂದ ನೀರಿನ ಮೊರೆತ ಆವರಿಸಿದೆ.ಕೈಮಗ್ಗದಲ್ಲಿ ನೇಯ್ದ ಗುಳೇದಗುಡ್ಡ ಹಾಗೂ ಕಮತಗಿಯ ಖಣಗಳು (ರವಿಕೆ) ವಿದೇಶದಲ್ಲೂ ಹೆಸರುವಾಸಿ. ಕಮತಗಿಯ ಹುಚ್ಚೇಶ್ವರ ನಾಟಕ ಸಂಘ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ಕೈಮಗ್ಗದ ಜೊತೆಗೆ ರಂಗಕಲಾವಿದರು, ಹುಚ್ಚೇಶ್ವರ ಮಠ ಈ ಊರಿನ ಪ್ರಮುಖ ವೈಶಿಷ್ಟ್ಯ. ಸದ್ಯ ಸ್ಥಳೀಯ ಗಂಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.