ಬೆಳಗಾವಿ:ಬೆಳಗಾವಿಯಲ್ಲಿ ನೈರುತ್ಯ ಮುಂಗಾರು(ಜೂನ್–ಸೆಪ್ಟೆಂಬರ್) ಅವಧಿಯಲ್ಲಿ ವಾಡಿಕೆಯಂತೆ 612 ಮಿ.ಮೀಟರ್ ಮಳೆ ಆಗಬೇಕಿತ್ತು. ಆದರೆ, ಆಗಸ್ಟ್ 1 ರಿಂದ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ವಾಡಿಕೆಯ ಅರ್ಧದಷ್ಟು ಮಳೆ ಕೇವಲ 9 ದಿನಗಳಲ್ಲೇ ದಾಖಲಾಗಿದೆ.
ಆಗಸ್ಟ್ 1 ರಿಂದ 9 ರ ಅವಧಿಯಲ್ಲಿ ಬರೋಬ್ಬರಿ 280 ಮಿ.ಮೀಟರ್‌ಮಳೆ ದಾಖಲಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 42 ಮಿ.ಮೀಟರ್ಮಳೆ ಬೀಳುತ್ತಿತ್ತು. ಈ ಅವಧಿಯಲ್ಲಿ ವಾಡಿಕೆಗಿಂತ ಏಳು ಪಟ್ಟು ಹೆಚ್ಚು ಮಳೆ ಸುರಿದಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೊಂಕಣ ಪ್ರದೇಶದಲ್ಲಿ ಅಪಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಮೈದುಂಬಿಹರಿಯುತ್ತಿದ್ದು ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿವೆ.
ಅದರಂತೆ ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿಯೂ ಇಷ್ಟೇ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವಾಗಿದೆ.ಧಾರವಾಡ ಮತ್ತು ಹಾವೇರಿಯಲ್ಲಿಮುಂಗಾರು ಹಂಗಾಮಿನಲ್ಲಿಕ್ರಮವಾಗಿ 498,485 ಮಿ.ಮೀಟರ್ ಮಳೆಯಾಗುತ್ತಿತ್ತು. ಸದ್ಯ ಕೇವಲ ಒಂಬತ್ತು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಕ್ರಮವಾಗಿ273,236 ಮಿ.ಮೀಟರ್ ಮಳೆ ಸುರಿದಿದೆ.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿಯೂಇದೇ ಪರಿಸ್ಥಿತಿ ಇದೆ. ಹಾಸನದಲ್ಲಿ ಸರಾಸರಿಗಿಂತ ಏಳು ಪಟ್ಟು ಹೆಚ್ಚು ಹಾಗೂಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ 4 ಪಟ್ಟು ಹೆಚ್ಚು ಮಳೆಯಾಗಿದೆ.
ವ್ಯತಿರಿಕ್ತ ಚಿತ್ರಣ
ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಅರ್ಧದಷ್ಟು ಮಳೆ ಯಾಗಿದೆಯಾದರೂ, ನದಿಗಳ ಪ್ರವಾಹದಿಂದಾಗಿ ಸಮಸ್ಯೆಗೆ ಸಿಲುಕಿವೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮಳೆ ಕೊರತೆ ಅನುಭವಿಸಿವೆ.
ಪ್ರವಾಹ ಸ್ಥಿತಿಗೆ ಹವಾಮಾನ ಬದಲಾವಣೆ ಕಾರಣ?
ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣೆ ದಳದ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರು ಹವಾಮಾನ ಬದಲಾವಣೆಯೇ ಪ್ರವಾಹ ಪರಿಸ್ಥಿತಿಗೆ ಕಾರಣ ಎಂಬುದು ಖಚಿತವಲ್ಲ ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ. ‘ಇಂತಹ ಬೆಳವಣಿಗೆಗಳು ಹವಾಮಾನ ವೈಪರೀತ್ಯದ ಲಕ್ಷಣಗಳು. ಇತ್ತೀಚಿನ ದಿನಗಳಲ್ಲಿ ಇಂತಹಘಟನೆಗಳು ಹೆಚ್ಚುತ್ತಿವೆ’ ಎಂದಿದ್ದಾರೆ.
ಹವಾಮಾನ ಮತ್ತು ಸಾಗರ ವಿಜ್ಞಾನ ಕೇಂದ್ರದ ಪ್ರೊ. ಜಿ.ಎಸ್. ಭಟ್ ಅವರು, ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಸಾಮಾನ್ಯ ವಿದ್ಯಮಾನಗಳು.ಸದ್ಯದ ಪರಿಸ್ಥಿತಿಗೆ ಹವಾಮಾನ ಬದಲಾವಣೆಯೇ ಕಾರಣ ಎನ್ನಲು ನಿಖರ ಕಾರಣಗಳು ಇಲ್ಲ. ಒಂದು ವೇಳೆ ಈ ರೀತಿಯ ಘಟನೆಗಳು ಸಾಮಾನ್ಯವೆನಿಸಿದರೆ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದಿದ್ದಾರೆ.
ಆಗಸ್ಟ್ 1–9 ಅವಧಿ: ಎಲ್ಲಿ ಎಷ್ಟು ಮಳೆ?
ಜಿಲ್ಲೆ | ವಾಡಿಕೆ ಮಳೆ | ಈವರೆಗೆ ಬಿದ್ದ ಮಳೆ | ಹೆಚ್ಚಳ |
ಬೆಳಗಾವಿ | 53ಮಿಮೀ | 309ಮಿಮೀ | 6 ಪಟ್ಟು |
ಧಾರವಾಡ | 40ಮಿಮೀ | 241ಮಿಮೀ | 6 ಪಟ್ಟು |
ಹಾವೇರಿ | 39ಮಿಮೀ | 288ಮಿಮೀ | 7.3ಪಟ್ಟು |
ಹಾಸನ | 57ಮಿಮೀ | 291ಮಿಮೀ | 5ಪಟ್ಟು |
ಕೊಡಗು | 213ಮಿಮೀ | 743ಮಿಮೀ | 3.4 ಪಟ್ಟು |
ಶಿವಮೊಗ್ಗ | 179ಮಿಮೀ | 620ಮಿಮೀ | 3.4 ಪಟ್ಟು |
ಚಿಕ್ಕಮಗಳೂರು | 134ಮಿಮೀ | 432ಮಿಮೀ | 3.2 ಪಟ್ಟು |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.