ADVERTISEMENT

ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಕ್ರಮ: ಸತ್ಯಶೋಧನೆಗೆ ಸಮಿತಿ

ನೇಮಕಾತಿಯಲ್ಲಿ ಭ್ರಷ್ಟಾಚಾರ: ವಿಚಾರಣೆಗೆ ಆದೇಶಿಸಿದ ರಾಜ್ಯಪಾಲ ಗೆಹಲೋತ್

ಎ.ಎಂ.ಸುರೇಶ
Published 13 ಫೆಬ್ರುವರಿ 2026, 0:30 IST
Last Updated 13 ಫೆಬ್ರುವರಿ 2026, 0:30 IST
   

ಬೆಂಗಳೂರು: ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರಗಳ
ಬಗ್ಗೆ ವಿಚಾರಣೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರತ್ಯೇಕ ಸತ್ಯ ಶೋಧನಾ ಸಮಿತಿಗಳನ್ನು ರಚಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ತುಮಕೂರು
ವಿಶ್ವವಿದ್ಯಾಲಯ ಹಾಗೂ ಗುಲಬರ್ಗ ವಿಶ್ವವಿದ್ಯಾಲಯದಲ್ಲಿ ಹಣ ದುರುಪಯೋಗ, ನೇಮಕಾತಿ ಅಕ್ರಮ, ನಿಯಮಗಳ ಉಲ್ಲಂಘನೆ, ಆಡಳಿತ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ಕಂಡುಬಂದಿದ್ದವು. ಇದರ ಬಗ್ಗೆ ನಿಖರ ವರದಿ ಪಡೆಯಲು ಮುಂದಾಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಉನ್ನತ ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಪರಿಷತ್‌ನ ಅಧಿಕಾರಿಗಳು ಪ್ರಾಥಮಿಕ ಹಂತದಲ್ಲಿ ನಡೆಸಿದ ವಿಚಾರಣೆ ವೇಳೆ ಲೋಪಗಳು ಆಗಿರುವುದು ಕಂಡುಬಂದಿತ್ತು. ಇದನ್ನು ಆಧರಿಸಿ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಮಾಡಿದ ಮನವಿ ಆಧರಿಸಿ, ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ ಎಂದು ಗೊತ್ತಾಗಿದೆ. 

ADVERTISEMENT

ಕರ್ನಾಟಕ ಮುಕ್ತ ವಿ.ವಿ.:

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಸಚಿವರ ವಿರುದ್ಧ ಕಳೆದ ವರ್ಷ ಲಂಚ ಹಾಗೂ ಭ್ರಷ್ಟಾಚಾರದ ಆರೋಪ ಎದುರಾಗಿತ್ತು. ಉನ್ನತ ಶಿಕ್ಷಣ ಪರಿಷತ್‌ನ ಆಗಿನ ಉಪಾಧ್ಯಕ್ಷ ಪ್ರೊ.ಎಸ್‌.ಆರ್‌.ನಿರಂಜನ್‌ ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪ್ರಾಥಮಿಕ ಹಂತದ ವಿಚಾರಣೆ ನಡೆಸಿದ್ದರು.

ಗಂಭೀರ ಪ್ರಮಾದಗಳು ಆಗಿರುವುದನ್ನು ಪತ್ತೆಹಚ್ಚಿದ್ದ ಅವರು, ಇನ್ನೂ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದರು. ಇದನ್ನು ಆಧರಿಸಿ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಬಿ.ಎ.ಪಾಟೀಲ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಮಂಜೂರಾಗಿರುವ ಹುದ್ದೆಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ, ಅನವಶ್ಯಕವಾಗಿ ಪ್ರಾದೇಶಿಕ ಕೇಂದ್ರಗಳ ಸ್ಥಾಪನೆ ಮತ್ತು ತಾತ್ಕಾಲಿಕ ನಿರ್ದೇಶಕರ ನೇಮಕ, ಸರ್ಕಾರದ ಒಪ್ಪಿಗೆ ಇಲ್ಲದೆ ಹುದ್ದೆಗಳ ಸೃಷ್ಟಿ, ಖಾಸಗಿ ಅಧ್ಯಯನ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಮಿತಿ ವಿಚಾರಣೆ ನಡೆಸಲಿದೆ.

ತುಮಕೂರು ವಿ.ವಿ.:

ಪ್ರಥಮ ದರ್ಜೆ ಸಹಾಯಕರ ಎಂಟು ಹುದ್ದೆಗಳು ನೇರ ನೇಮಕಾತಿಗೆ ಮೀಸಲಾಗಿದ್ದವು. ಆದರೆ, ಈ ಹುದ್ದೆಗಳನ್ನು ವಿಶ್ವವಿದ್ಯಾಲಯದ ಆಡಳಿತವು ಬಡ್ತಿಯಿಂದ ತುಂಬುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ. ಇದು ಸೇರಿ ನೇಮಕಾತಿ, ಬಡ್ತಿಯಲ್ಲಿ ಆಗಿರುವ ಲೋಪಗಳ ವಿಚಾರಣೆಗೆ ವಿಶ್ರಾಂತ ನ್ಯಾಯಮೂರ್ತಿ ಪಿ.ಕೃಷ್ಣಭಟ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಜಾನಪದ ವಿ.ವಿ.:

ಉನ್ನತ ಶಿಕ್ಷಣ ಇಲಾಖೆಯ ಒಪ್ಪಿಗೆ ಇಲ್ಲದೆ ಭದ್ರತಾ ಸಿಬ್ಬಂದಿ ನೇಮಕ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿರುವ ಲ್ಯಾಪ್‌ಟಾಪ್‌ಗಳ ಖರೀದಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳು ಇಲ್ಲದೆ ಇರುವುದು ಸೇರಿದಂತೆ ಇನ್ನಿತರ ಪ್ರಮಾದಗಳ ವಿಚಾರಣೆಗೆ ವಿಶ್ರಾಂತ ನ್ಯಾಯಮೂರ್ತಿ ಉಮೇಶ್‌ ಅಡಿಗ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ವರದಿ ನೀಡಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ.

ಗುಲಬರ್ಗ ವಿ.ವಿ.:

ಬಿ.ಇಡಿ 2 ಮತ್ತು 4ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಸಕಾಲ
ದಲ್ಲಿ ಅಂಕಪಟ್ಟಿ ನೀಡದೆ ಇರುವುದು, ವಿ.ವಿ.ಗೆ ಆಗಿರುವ ಆರ್ಥಿಕ ನಷ್ಟ ಇತ್ಯಾದಿಗಳ ಬಗ್ಗೆ ವಿಚಾರಣೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.

ಯಾವ ವಿ.ವಿ: ಯಾರ ನೇತೃತ್ವ

  • ಕರ್ನಾಟಕ ಮುಕ್ತ ವಿ.ವಿ.; ನ್ಯಾ. ಬಿ.ಎ.ಪಾಟೀಲ

  • ತುಮಕೂರು ವಿ.ವಿ.;ನ್ಯಾ. ಪಿ.ಕೃಷ್ಣಭಟ್‌ 

  • ಜಾನಪದ ವಿ.ವಿ.:ನ್ಯಾ. ಉಮೇಶ್‌ ಅಡಿಗ

  • ಗುಲಬರ್ಗ ವಿ.ವಿ.:ನ್ಯಾ.ರಾಮಚಂದ್ರ ಡಿ.ಹುದ್ದಾರ್‌

ಇನ್ನಷ್ಟು ವಿ.ವಿ.ಗಳಲ್ಲಿ ಅವ್ಯವಹಾರ?

ಮಂಗಳೂರು, ಶಿವಮೊಗ್ಗ ಸೇರಿದಂತೆ ಇನ್ನೂ ಹಲವು ವಿಶ್ವವಿದ್ಯಾಲಯಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಲು ರಾಜ್ಯಪಾಲರು ಸದ್ಯದಲ್ಲೇ ಸತ್ಯಶೋಧನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ₹11 ಕೋಟಿ ಅವ್ಯವಹಾರ ಆಗಿದೆ. ಶಿವಮೊಗ್ಗ ವಿಶ್ವವಿದ್ಯಾಲಯದ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿವೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.