
ಬೆಂಗಳೂರು: ವಿವಿಧ ಇಲಾಖೆಗಳಲ್ಲಿನ 56,432 ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಲು ನಿರ್ಧರಿಸಿರುವ ಸರ್ಕಾರ, ಪರಿಶಿಷ್ಟ ಸಮುದಾಯಕ್ಕೆ ಶೇ 6ರಷ್ಟು ಹೆಚ್ಚಿಸಿರುವ ಮೀಸಲಾತಿಯ ಪ್ರಮಾಣದ ಹುದ್ದೆಗಳನ್ನು ಕಾಯ್ದಿರಿಸಿ ಪ‍್ರಕ್ರಿಯೆ ಆರಂಭಿಸಲಿದೆ.
ಖಾಲಿ ಹುದ್ದೆಗಳ ನೇಮಕಾತಿಯನ್ನು 30 ದಿನದೊಳಗೆ ಪೂರೈಸುವ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 2022ರಲ್ಲಿ ಇದ್ದಂತೆ ಶೇ 18ಕ್ಕೆ ಸೀಮಿತಗೊಳಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿತ್ತು.
ಬಿಜೆಪಿ ಆಡಳಿತ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದಾಗಿ, ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿತ್ತು. ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಬಾರದು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದ ಕೆಲವರು, ಸರ್ಕಾರದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹಿಗ್ಗಿಸಿ ಒಟ್ಟು ಮೀಸಲು ಪ್ರಮಾಣವನ್ನು ಶೇಕಡ 50ರಿಂದ 56ಕ್ಕೆ ಹೆಚ್ಚಿಸಿದ್ದ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು’ ಎಂದು ಹೈಕೋರ್ಟ್ ಕೂಡ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ, ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳಮೀಸಲಾತಿ ಕುರಿತ ಸರ್ಕಾರದ ಆದೇಶಗಳಿದ್ದರೂ ನೇಮಕಾತಿಗೆ ತಡೆಯಾಗಿತ್ತು.
ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಗುರುವಾರ ನಡೆದ ಸಂಪುಟ ಸಭೆಯಲ್ಲಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಪರಿಶಿಷ್ಟ ಜಾತಿಗೆ ಶೇ 2, ಪರಿಶಿಷ್ಟ ಪಂಗಡಕ್ಕೆ ಶೇ 4ರಷ್ಟು ಹುದ್ದೆಗಳನ್ನು ಕಾಯ್ದಿರಿಸಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಉದಾಹರಣೆಗೆ ಒಂದು ಇಲಾಖೆಯಲ್ಲಿ 1,000 ಹುದ್ದೆಗಳನ್ನು ಭರ್ತಿ ಮಾಡಿದರೆ 60 ಹುದ್ದೆಗಳನ್ನು ಕಾಯ್ದಿರಿಸಿ, ಕೋರ್ಟ್ ಆದೇಶದ ನಂತರ ಭರ್ತಿ ಮಾಡಲಾಗುತ್ತದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಶೇ 17ಕ್ಕೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನೂ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ, ಎಲ್ಲ ನೇಮಕಾತಿ ಪ್ರಕ್ರಿಯೆಗಳಿಗೂ ತಡೆ ಬಿದ್ದಿತ್ತು. ಇದಕ್ಕೆ ಕಾನೂನು ಬಲ ನೀಡಲು ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಕಾಯ್ದೆ’ಯನ್ನು ರಾಜ್ಯ ಸರ್ಕಾರ ತಂದಿದೆ. ಆದರೆ, ನ್ಯಾಯಾಲಯದ ಪ್ರಕರಣ ಇತ್ಯರ್ಥವಾಗುವವರೆಗೆ ಹಿಂದಿನಂತೆ ಶೇ 15ರಷ್ಟು ಒಳ ಮೀಸಲಾತಿ ಪ್ರಕಾರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಹಿಂದುಳಿದ ವರ್ಗಗಳೂ ಸೇರಿ ಇರುವ ಶೇ 50ರಷ್ಟು ಮೀಸಲಾತಿ ಆಧಾರದಲ್ಲೇ ಮುಂದಿನ 30 ದಿನದೊಳಗೆ ನೇರ ನೇಮಕಾತಿ ಪ್ರಕ್ರಿಯೆಯಡಿ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಶಾಲಾ ಶಿಕ್ಷಣ, ಆರೋಗ್ಯ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.