ಬೆಂಗಳೂರು: ‘ಮೈಕ್ರೊ ಫೈನಾನ್ಸ್ ಕಂಪನಿಗಳು ಸಾಲ ಮತ್ತು ಬಡ್ಡಿ ವಸೂಲಿಗೆ ಕಾನೂನುಬಾಹಿರ ಕ್ರಮಗಳನ್ನು ಅನುಸರಿಸಿದರೆ, ಶಿಕ್ಷಿಸಲು ಈಗಾಗಲೇ ಕಾನೂನುಗಳಿವೆ. ಅವುಗಳನ್ನೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತನ್ನಿ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
‘ಕರ್ನಾಟಕ ಮೈಕ್ರೊ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025’ಕ್ಕೆ ಅಂಕಿತ ಹಾಕದೆ ವಾಪಸ್ ಕಳುಹಿಸಿ ಬರೆದ ಸುದೀರ್ಘ ಪತ್ರದಲ್ಲಿ ರಾಜ್ಯಪಾಲ ಈ ಅಂಶವನ್ನು ಉಲ್ಲೇಖಿಸಿದ್ದಾರೆ.
‘ಕಾನೂನುಗಳು ಇಲ್ಲದೇ ಇದ್ದ ಸಂದರ್ಭದಲ್ಲಿ ಸುಗ್ರೀವಾಜ್ಞೆ ಅನಿವಾರ್ಯವಾಗುತ್ತದೆ. ಆದರೆ ಸಾಲ ನೀಡುವವರಿಂದಾಗುವ ಕಿರುಕುಳವನ್ನು ತಡೆಯಲು ‘ಮನಿ ಲೆಂಡರ್ಸ್ ಕಾಯ್ದೆ–1961’, ‘ನೆಗೋಷಿಯೆಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ–1881’, ‘ಕರ್ನಾಟಕ ಋಣ ಕಾಯ್ದೆ–1976’, ‘ಭಾರತೀಯ ದಂಡ ಸಂಹಿತೆ’ ಹಾಗೂ ‘ಕರ್ನಾಟಕ ಪೊಲೀಸ್ ಕಾಯ್ದೆ’ಗಳನ್ನು ಇಲ್ಲಿ ಬಳಸಲು ಅವಕಾಶವಿದೆ’ ಎಂದಿದ್ದಾರೆ.
‘ಲಭ್ಯ ಕಾನೂನುಗಳ ಅನುಷ್ಠಾನದಲ್ಲಿ ದಕ್ಷತೆ ಮತ್ತು ಪೊಲೀಸ್ ವ್ಯವಸ್ಥೆಯ ಬಳಕೆಯಲ್ಲಿ ಸಮಸ್ಯೆ ಇರುವುದರಿಂದಲೇ ಕಿರುಕುಳ ಉಂಟಾಗುತ್ತಿದೆ. ಅವುಗಳನ್ನೇ ಪರಿಣಾಮಕಾರಿಯಾಗಿ ಬಳಸಿ, ಸಮಸ್ಯೆಗಳನ್ನು ನಿಯಂತ್ರಿಸಬಹುದು’ ಎಂದು ರಾಜ್ಯಪಾಲ ಸೂಚಿಸಿದ್ದಾರೆ.
'ಇಲ್ಲಿ ಎತ್ತಲಾಗಿರುವ ಅಂಶಗಳಿಗೆ ಸ್ಪಷ್ಟೀಕರಣಗಳನ್ನು ಒಳಗೊಂಡ ಕಡತವನ್ನು ಮರುಸಲ್ಲಿಸಿ’ ಎಂದು ಸರ್ಕಾರಕ್ಕೆ ಸೂಚಿಸಿದ್ದಾರೆ.
ಇದಕ್ಕೆ ವಿವರಣಾತ್ಮಕ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ, ‘ಸಾಲ ನೀಡಿದವರು ಅನುಸರಿಸುವ ಕಾನೂನುಬಾಹಿರ ಕ್ರಮಗಳನ್ನು, ಆ ಕ್ರಮಗಳ ಸ್ವರೂಪದ ಕಾರಣಕ್ಕೆ ಶಿಕ್ಷಿಸಲು ಕಾನೂನುಗಳಿವೆ. ಆದರೆ ಸಾಲದ ಕಾರಣಕ್ಕೆ ಇಂತಹ ಕೃತ್ಯ ಎಸಗಿದಾಗ ಶಿಕ್ಷೆಗೆ ಒಳಪಡಿಸಲು ನಿರ್ದಿಷ್ಟ ಕಾನೂನು ಇಲ್ಲ. ಸಾಲಗಾರರ ಹಿತ ಕಾಪಾಡಲು ಪ್ರತ್ಯೇಕ ಕಾನೂನಿನ ಅವಶ್ಯಕತೆ ಇದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಮೈಕ್ರೊ ಫೈನಾನ್ಸ್‌ಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳು ನೋಂದಾಯಿತ ಮತ್ತು ಪರವಾನಗಿ ಹೊಂದಿದ ಕಂಪನಿಗಳಿಗಷ್ಟೇ ಅನ್ವಯವಾಗುತ್ತದೆ. ನೋಂದಣಿ ಮತ್ತು ಪರವಾನಗಿ ಇಲ್ಲದ ಕಂಪನಿಗಳಿಗೆ ಇದು ಅನ್ವಯವಾಗುವುದಿಲ್ಲ. ಅವುಗಳ ಕಾನೂನುಬಾಹಿರ ನಡೆಗಳಿಂದ ಜನರನ್ನು ರಕ್ಷಿಸಲು ಸುಗ್ರೀವಾಜ್ಞೆ ಅಗತ್ಯ’ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.