ADVERTISEMENT

ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ. ಎಸ್‌.ಆರ್‌. ಗುಂಜಾಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 7:49 IST
Last Updated 13 ಫೆಬ್ರುವರಿ 2025, 7:49 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಧಾರವಾಡ ಜಿಲ್ಲೆಯ ಡಾ. ಎಸ್‌.ಆರ್‌. ಗುಂಜಾಳ ಅವರು 2024–25ನೇ ಸಾಲಿನ ಬವಸ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಇಂದು (ಗುರುವಾರ) ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.

ADVERTISEMENT

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಕೆ. ರಾಜಕುಮಾರ್‌

ಕೆ. ರಾಜಕುಮಾರ್‌ ಅವರು ಕಳೆದ 45 ವರ್ಷಗಳಿಂದ ನಾಡು-ನುಡಿ, ನೆಲ-ಜಲ-ಸಂಸ್ಕೃತಿಯ ಕುರಿತು ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಅವುಗಳ ಸಂರಕ್ಷಣೆಗಾಗಿ ಹಲವಾರು ಹೋರಾಟಗಳಲ್ಲಿ ಹಾಗೂ ವಿವಿಧ ಚಳವಳಿಗಳಲ್ಲಿ ಭಾಗಿಯಾಗಿರುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳಲ್ಲಿ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಅನುಷ್ಠಾನದ ಕುರಿತಾದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆಡಳಿತ ಕನ್ನಡ ಕಾರ್ಯಶಿಬಿರಗಳ ನಿರ್ದೇಶಕರಾಗಿ, ಕನ್ನಡ ಬಾರದವರಿಗೆ ಕನ್ನಡ ಬೋಧನೆ ತರಗತಿಗಳನ್ನು ನಡೆಸಿದ್ದಾರೆ.

ಇಂದಿಗೂ ಕನ್ನಡ ಭಾಷೆಯ ಕುರಿತಂತೆ ಕರೆಮಾಡಿ ಮಾಹಿತಿ ಕೋರುವವರಿಗೆ ಉಚಿತ ಮಾರ್ಗದರ್ಶನ ನೀಡುತ್ತಿದಾರೆ.

ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಪ್ರಕಾಶಕರ ಸಂಘದಿಂದ ಶ್ರೇಷ್ಠ ಸಾಹಿತ್ಯ ಪರಿಚಾರಕ ಪ್ರಶಸ್ತಿ ಇತ್ಯಾದಿ ಗೌರವಗಳು ಲಭಿಸಿವೆ.

ಅಕ್ಕಮಹಾದೇವಿ ಪ್ರಶಸ್ತಿ: ಡಾ. ಹೇಮಾ ಪಟ್ಟಣಶೆಟ್ಟಿ, ಧಾರವಾಡ

ಡಾ. ಹೇಮಾ ಪಟ್ಟಣಶೆಟ್ಟಿಯವರು ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿಯಾಗಿ, ಅನುವಾದಕಿಯಾಗಿ, ರಂಗನಟಿಯಾಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಪ್ರಸಿದ್ಧರಾಗಿದ್ದಾರೆ. 1979 ರಲ್ಲಿ ಅನನ್ಯ ಪ್ರಕಾಶನವನ್ನು ಸ್ಥಾಪಿಸಿ ಕನ್ನಡದ ಖ್ಯಾತ ಲೇಖಕರ 85 ಕೃತಿಗಳನ್ನು ಪ್ರಕಟಿಸಿದ್ದಾರೆ.

ನೊಂದ ಮಹಿಳೆಯರಿಗಾಗಿ ʼಸಾಂತ್ವನʼ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅನೇಕ ಮಹಿಳಾಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಇವರು ʼವೇಶ್ಯೆಯರು, ಬಾಲವೇಶ್ಯೆಯರು ಮತ್ತು ವೇಶ್ಯಾಮಕ್ಕಳ ಅಧ್ಯಯನʼ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಕರ್ನಾಟಕದ ಸರ್ಕಾರದ ʼಜಲಸಂವರ್ಧನೆ ಯೋಜನಾ ಕೇಂದ್ರʼದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಹಲವಾರು ಕೃತಿಗಳು ಹಿಂದಿ, ತೆಲುಗು, ಉರ್ದು, ಇಂಗ್ಲಿಷ್‌ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದವಾಗಿವೆ.

ಪಂಪ ಪ್ರಶಸ್ತಿ: ಡಾ. ಬಿ.ಎ. ವಿವೇಕ ರೈ, ದಕ್ಷಿಣ ಕನ್ನಡ

ಕನ್ನಡದ ಖ್ಯಾತ ಸಂಶೋಧಕರಾದ ಡಾ. ಬಿ.ಎ. ವಿವೇಕ ರೈ ಅವರು ಸಂಸ್ಕೃತಿ ಚಿಂತಕರು, ವಿಮರ್ಶಕರು, ಅನುವಾದಕರು ಹಾಗೂ ಜಾನಪದ ವಿದ್ವಾಂಸರಾಗಿದ್ದಾರೆ.

ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ-ತುಳು ಭಾಷೆಯ ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸುವ ಮೂಲಕ ಆ ಭಾಷೆಗಳ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು.

12ಕ್ಕೂ ಹೆಚ್ಚು ಮಹತ್ವದ ಕೃತಿಗಳು, ಕಾದಂಬರಿಗಳು, ಹಲವಾರು ಕೃತಿಗಳ ಸಂಪಾದನೆ, ತುಳು ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸಾಹಿತ್ಯ ರಚನೆ, ಕನ್ನಡ ಸಾಹಿತ್ಯದ ಜರ್ಮನ್‌ ಅನುವಾದ ಹೀಗೆ ವಿಪುಲವಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಜರ್ಮನಿಯ ವ್ಯೂತ್‌ಬರ್ಗ್‌ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ.

ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ, ಸಮ್ಮಾನಗಳು ಲಭಿಸಿವೆ.

ಪ್ರೊ.ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಸ. ರಘುನಾಥ, ಕೋಲಾರ

ವಿಶ್ರಾಂತ ಶಾಲಾಶಿಕ್ಷಕರಾದ ಶ್ರೀ ಸ. ರಘುನಾಥರವರು ಬಹುಮುಖ ಪ್ರತಿಭೆ, ಬಹುಸ್ತರಗಳ ಸಾಧಕ. ಅಧ್ಯಯನ, ಅಧ್ಯಾಪನಗಳ ಜೊತೆಗೆ ಸಾಹಿತ್ಯಕೃಷಿಯನ್ನೂ ಮೈಗೂಡಿಸಿಕೊಂಡವರು.

ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜನಪದ ಸಾಹಿತ್ಯ ಸಂಗ್ರಹ, ಗ್ರಂಥ ಸಂಪಾದನೆ, ಶಿಶುಸಾಹಿತ್ಯ ಮತ್ತು ನಿಘಂಟು ರಚನೆಗಳಲ್ಲಿ ತೊಡಗಿಕೊಂಡಿದ್ದಾರೆ. ಸಮಾಜಸೇವಕರು, ಪರಿಸರ ಪ್ರೇಮಿಗಳು, ಕಲಾಸಂಘಟಕರೂ ಹೌದು.

ಮುದ್ದಣ ಕಾವ್ಯ ಪ್ರಶಸ್ತಿ, ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು.

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಡಾ. ವೈ.ಸಿ. ಭಾನುಮತಿ, ಹಾಸನ

ಡಾ. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ.

ಜಾನಪದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಹಲವಾರು ಗೌರವ-ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಇತ್ಯಾದಿ ಪ್ರಶಸ್ತಿಗಳು ಇವರಿಗೆ ಸಂದಿವೆ.

ಬಿ.ವಿ. ಕಾರಂತ ಪ್ರಶಸ್ತಿ: ಶ್ರೀ ಜೆ. ಲೋಕೇಶ್‌, ಬೆಂಗಳೂರು

ಶ್ರೀ ಜೆ. ಲೋಕೇಶ್‌ರವರು ರಂಗ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿ 1972 ರಲ್ಲಿ ʼರಂಗಸಂಪದʼ ನಾಟಕ ಸಂಸ್ಥೆಯನ್ನು ಕಟ್ಟಿಬೆಳೆಸಿದವರಲ್ಲಿ ಒಬ್ಬರು.

ಶಕಶೈಲೂಷರು ಶಿಬಿರಾರ್ಥಿಗಳ ತಂಡ ಕಟ್ಟಿ ಹಲವಾರು ರಂಗನಾಟಕಗಳ ಯಶಸ್ವೀ ರಂಗಪ್ರಯೋಗ ಮಾಡಿದ್ದಾರೆ. ರಾಜ್ಯಾದ್ಯಂತ ನಾಟಕೋತ್ಸವಗಳನ್ನು ಏರ್ಪಡಿಸಿ ಪ್ರದರ್ಶಿಸಿದ ಕೀರ್ತಿ ಇವರದು.

ನಾಟಕದ ಸಾಹಿತ್ಯ ರಚನೆ, ಪ್ರಕಟಣೆ, ಪ್ರಯೋಗ, ಸಂಕಿರಣ, ಪ್ರದರ್ಶನ ಸಮ್ಮೇಳನ ಚಳವಳಿಗಳ ರೂವಾರಿಗಳು. ಕೆನಡಾದಲ್ಲಿ ನಡೆದ 21ನೇ ಅಂತಾರಾಷ್ಟ್ರೀಯ ರಂಗಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಹಾಗೂ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.