ADVERTISEMENT

ಇಂದಿನಿಂದಲೇ ‘ಉತ್ತರ’ದ ಚರ್ಚೆ: ಕಲಾಪ ಸಲಹಾ ಸಮಿತಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 23:30 IST
Last Updated 8 ಡಿಸೆಂಬರ್ 2025, 23:30 IST
<div class="paragraphs"><p>ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)</p></div>

ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)

   

ಬೆಳಗಾವಿ (ಸುವರ್ಣಸೌಧ): ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ವಿಚಾರಗಳ ಕುರಿತು ಮಂಗಳವಾರದಿಂದಲೇ (ಡಿ. 9) ಚರ್ಚೆ ನಡೆಸಲು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಶುಕ್ರವಾರದವರೆಗೆ (ಡಿ.12) ಈ ಚರ್ಚೆ ನಡೆಯಲಿದೆ.

ಅಧಿವೇಶನದ ಎರಡನೇ ವಾರದಲ್ಲಿ ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷಗಳಿಗೆ ಅವಕಾಶ ನೀಡಲಾಗುತ್ತಿತ್ತು. ಕೊನೆಯ ದಿನಗಳ ಅವಸರದಲ್ಲಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂಬ ಟೀಕೆಗಳೂ ಇದ್ದವು. ಈ ಬಾರಿ, ಆರಂಭದಲ್ಲೇ ಕಲ್ಯಾಣ, ಕಿತ್ತೂರು ಕರ್ನಾಟಕದ ಕುರಿತ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸರ್ಕಾರವು ಬಿಎಸಿ ಸಭೆಯಲ್ಲಿ ಪ್ರಸ್ತಾಪಿಸಿತು. ಅದಕ್ಕೆ ವಿರೋಧ ಪ‌ಕ್ಷ ಸಮ್ಮತಿಸಿತು.

ADVERTISEMENT

‘ಆಡಳಿತ ಪಕ್ಷದಿಂದಲೇ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಆರಂಭಿಸುತ್ತೇವೆ’ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಪ್ರಕಟಿಸಿದರು. ಆದರೆ, ವಿರೋಧ ಪಕ್ಷದ ಸದಸ್ಯರು ಅದಕ್ಕೆ ಸಮ್ಮತಿಸಲಿಲ್ಲ. ನಾವು ಈಗಾಗಲೇ ನಿಲುವಳಿ ಸೂಚನೆ ಮಂಡನೆಗೆ ಸಭಾಧ್ಯಕ್ಷರ ಕಚೇರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ನೋಟಿಸ್ ಅಗತ್ಯವಿಲ್ಲ. ನಿಲುವಳಿ ಸೂಚನೆಯನ್ನು ವಿರೋಧ ಪಕ್ಷ ಮಂಡಿಸಬೇಕೆಂಬುದು ಕ್ರಮ. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಬಲವಾಗಿ ಪ್ರತಿಪಾದಿಸಿದರು.

ಈ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುವುದು ಎಂದು ಸಭೆಯಲ್ಲಿ ಸರ್ಕಾರ ತಿಳಿಸಿದೆ. ದ್ವೇಷ ಭಾಷಣ ನಿಯಂತ್ರಣವೂ ಸೇರಿದಂತೆ ಮೂರು ಪ್ರಮುಖ ಮಸೂದೆಗಳ ಕುರಿತು ಬಗ್ಗೆ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆಯನ್ನೂ ನೀಡಿದೆ. ಪ್ರತಿದಿನ ಮಸೂದೆ ಮಂಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಉತ್ತರ ಕರ್ನಾಟಕ ಚರ್ಚೆಯ ಸಂದರ್ಭದಲ್ಲಿ ಬೇರೆ ವಿಚಾರಗಳ ಚರ್ಚೆ ಬೇಡ ಎಂದು ಪ್ರತಿಪಾದಿಸಿತು.

ಶಾಸನಸಭೆಯ ಅಧಿವೇಶನ ಕರೆಯುವುದೇ ಶಾಸನ ರಚನೆಗೆ. ಹೀಗಾಗಿ ಮಸೂದೆಗಳ ಮಂಡನೆಗೆ ಷರತ್ತು ಸರಿಯಲ್ಲ. ಎಲ್ಲ ವಿಚಾರಗಳ ಚರ್ಚೆಗೂ ಸಾಕಷ್ಟು ಅವಕಾಶ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಬಿಎಸಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಗೃಹ ಸಚಿವ ಜಿ. ಪರಮೇಶ್ವರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಬಿಜೆಪಿಯ ವಿ. ಸುನೀಲ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.