ಬೆಂಗಳೂರು: ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ.
ಶಾಸಕರ ವೇತನ ₹ 40 ಸಾವಿರದಿಂದ ₹ 80 ಸಾವಿರ, ವಿಧಾನಸಭಾಧ್ಯಕ್ಷ, ಸಚಿವರ ವೇತನ ₹ 60 ಸಾವಿರದಿಂದ ₹ 1.25 ಲಕ್ಷ, ವಿಧಾನ ಪರಿಷತ್ ಸಭಾಪತಿ ವೇತನ ₹ 75 ಸಾವಿರದಿಂದ ₹ 1.25 ಲಕ್ಷ, ಮುಖ್ಯಮಂತ್ರಿಯ ವೇತನ ₹ 75 ಸಾವಿರದಿಂದ ₹ 1.50 ಲಕ್ಷ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಮೂಲಕ, ಸಿಎಂ, ಸಚಿವರು, ಶಾಸಕರ ವೇತನ ಇಮ್ಮಡಿಯಷ್ಟು ಹೆಚ್ಚಳ ಆಗಲಿದೆ.
ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭಾಧ್ಯಕ್ಷರು, ಸಭಾಪತಿ, ವಿರೋಧ ಪಕ್ಷದ ನಾಯಕರು, ಮುಖ್ಯ ಸಚೇತಕರ ವೇತನ, ಭತ್ಯೆ ಹೆಚ್ಚಳದಿಂದ ₹ 50 ಕೋಟಿ, ಮುಖ್ಯಮಂತ್ರಿ, ಸಚಿವರುಗಳ ವೇತನ ಭತ್ಯೆ ಹೆಚ್ಚಳದಿಂದ ₹ 10 ಕೋಟಿ ಸೇರಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹ 62 ಕೋಟಿ ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ.
ವೇತನ ಮತ್ತು ವಿವಿಧ ಭತ್ಯೆಗಳನ್ನು ಹೆಚ್ಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025’ರ ಸಿದ್ಧವಾಗಿದ್ದು, ಈ ಅಧಿವೇಶನದಲ್ಲಿಯೇ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ.
‘ಈ ಎರಡೂ ತಿದ್ದುಪಡಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಎರಡೂ ಪ್ರತ್ಯೇಕ ಮಸೂದೆಗಳಲ್ಲಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಶಿಫಾರಸು ಇರುವುದರಿಂದ ವಿಧಾನಮಂಡಲದಲ್ಲಿ ಮಂಡಿಸುವ ಮೊದಲು ರಾಜ್ಯಪಾಲರಿಂದ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ, ರಾಜ್ಯಪಾಲರ ಒಪ್ಪಿಗೆಗಾಗಿ ಕಡತ ಸಲ್ಲಿಸಲಾಗಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
‘2015ರಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಿಸಿದ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ (2022) ಮತ್ತೆ ಪರಿಷ್ಕರಿಸಲಾಗಿತ್ತು. ಅಂದು ಮಸೂದೆ ಮಂಡಿಸಿದ್ದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಬೆಲೆ ಸೂಚ್ಯಂಕದ ಆಧಾರದಲ್ಲಿ 2023 ಏಪ್ರಿಲ್ 1ರಿಂದ ಪ್ರತಿ 5 ವರ್ಷಕ್ಕೊಮ್ಮೆ ಸಂಬಳ ಹೆಚ್ಚಿಸುವ ಬಗ್ಗೆಯೂ ಮಸೂದೆಯಲ್ಲಿಯೇ ಪ್ರಸ್ತಾಪಿಸಿದ್ದರು. ಆದರೆ, ಎರಡು ವರ್ಷ ತುಂಬ ಮೊದಲೇ ಪರಿಷ್ಕರಣೆಗೆ ಶಾಸಕರ ವಲಯದಿಂದ ಬೇಡಿಕೆ ಬಂದಿತ್ತು. ಪ್ರಸಕ್ತ ಅಧಿವೇಶನದ ಮೊದಲ ದಿನ ನಡೆದಿದ್ದ ಕಲಾಪ ವ್ಯವಹಾರಗಳ ಸಮಿತಿ (ಬಿಎಸಿ) ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ಆಗಿತ್ತು’ ಎಂದೂ ಮೂಲಗಳು ಹೇಳಿವೆ.
ಮುಖ್ಯಮಂತ್ರಿ ವೇತನ;75 ಸಾವಿರ; 1.50 ಲಕ್ಷ
ಸಚಿವರ ವೇತನ;60 ಸಾವಿರ;1.25 ಲಕ್ಷ
ಮುಖ್ಯಮಂತ್ರಿ, ಸಚಿವರಿಗೆ ಆತಿಥ್ಯ ಭತ್ಯೆ; 4.50 ಲಕ್ಷ; 5 ಲಕ್ಷ
ಸಚಿವರಿಗೆ ಮನೆ ಬಾಡಿಗೆ ಭತ್ಯೆ; 1.20 ಲಕ್ಷ;2.50 ಲಕ್ಷ
ರಾಜ್ಯ ಸಚಿವರ ವೇತನ;50 ಸಾವಿರ;75 ಸಾವಿರ
ರಾಜ್ಯ ಸಚಿವರಿಗೆ ಮನೆ ಬಾಡಿಗೆ ಭತ್ಯೆ;1.20ಲಕ್ಷ;2ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.