ADVERTISEMENT

ಕೋವಿಡ್‌ ಸಂಕಷ್ಟ, ಲಾಕ್‌ಡೌನ್‌ ನಡುವೆಯೇ ದುಪ್ಪಟ್ಟಾಯ್ತು ಸರ್ಕಾರಿ ವೆಚ್ಚ

2020ರಲ್ಲಿ ₹8,866 ಕೋಟಿ– 2021ರಲ್ಲಿ ₹18,030 ಕೋಟಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 20:42 IST
Last Updated 21 ಜೂನ್ 2021, 20:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಸಂಕಷ್ಟ, ಲಾಕ್‌ಡೌನ್‌ ನಡುವೆಯೇ ಸರ್ಕಾರದ ಸಾರ್ವಜನಿಕ ವೆಚ್ಚ ದುಪ್ಪಟ್ಟಾಗಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಸಾರ್ವಜನಿಕ ವೆಚ್ಚ ದ್ವಿಗುಣಗೊಂಡಿದೆ.

2020ನೇ ಆರ್ಥಿಕ ವರ್ಷದ ಸಾರ್ವಜನಿಕ ವೆಚ್ಚಕ್ಕೆ ನಿಗದಿಯಾಗಿದ್ದ ಒಟ್ಟು ಮೊತ್ತದ ಶೇಕಡ 4ರಷ್ಟು ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಖರ್ಚಾಗಿತ್ತು. ಆರ್ಥಿಕ ಇಲಾಖೆ ಬಹಿರಂಗಪಡಿಸಿರುವ ಅಂಕಿ–ಅಂಶಗಳ ಪ್ರಕಾರ, ಈ ಬಾರಿ ಒಟ್ಟು ನಿಗದಿಯಾಗಿರುವ ಮೊತ್ತದ ಶೇ 8.4ರಷ್ಟು ಮೊದಲ ಎರಡು ತಿಂಗಳಲ್ಲೇ ಖಾಲಿಯಾಗಿದೆ.

ಈ ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಸಾರ್ವಜನಿಕ ವೆಚ್ಚಕ್ಕಾಗಿ ₹ 18,030.46 ಕೋಟಿ ಖರ್ಚು ಮಾಡಲಾಗಿದೆ. 2020ರ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರದ ವೆಚ್ಚ ₹ 8,866.45 ಕೋಟಿ ಮಾತ್ರ ಇತ್ತು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರ್ಥಿಕ ಇಲಾಖೆ ಕಾರ್ಯದರ್ಶಿ (ವೆಚ್ಚ) ಪಿ.ಸಿ. ಜಾಫರ್‌, ‘ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಕಳೆದ ವರ್ಷ ಲಾಕ್‌ಡೌನ್‌ ಇದ್ದ ಕಾರಣದಿಂದ ವೇತನ ಮತ್ತು ತುರ್ತು ವೆಚ್ಚಗಳನ್ನಷ್ಟೇ ಮಾಡಲಾಗಿತ್ತು. ಈ ಬಾರಿ ಅಂತಹ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರಲಿಲ್ಲ’ ಎಂದರು.

ಕಳೆದ ಆರ್ಥಿಕ ವರ್ಷದಲ್ಲಿ ಕೋವಿಡ್‌ ಕಾರಣದಿಂದ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಇದ್ದ ವೆಚ್ಚ ಮಾಡುವ ಆರ್ಥಿಕ ಅಧಿಕಾರಗಳನ್ನು ಮಿತಿಗೊಳಿಸಲಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಕೋವಿಡ್‌ ಪೂರ್ವದಲ್ಲಿ ಇದ್ದ ಅಧಿಕಾರಗಳನ್ನು ಎಲ್ಲರಿಗೂ ನೀಡಲಾಗಿದೆ. ಹೀಗಾಗಿ, ವೆಚ್ಚ ಹೆಚ್ಚಾಗಿರಬಹುದು ಎಂದು ತಿಳಿಸಿದರು.

ಅಂಕಿಅಂಶ

2019–20ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ಆಗಿರುವ ವೆಚ್ಚ ಕಡಿಮೆಯೇ ಇದೆ. 2020–21ರಲ್ಲಿ 40 ಇಲಾಖೆಗಳಿಗೆ ನಿಗದಿಯಾಗಿದ್ದ ಅನುದಾನದಲ್ಲಿ ₹ 19,774 ಕೋಟಿ ಕಡಿತ ಮಾಡಲಾಗಿತ್ತು. ಅಂತಿಮವಾಗಿ ವಾರ್ಷಿಕ ನಿಗದಿಯಾಗಿದ್ದ ಮೊತ್ತದಲ್ಲಿ ಶೇ 79.71ರಷ್ಟು ಮೊತ್ತವನ್ನು ಮಾತ್ರ ಬಳಕೆ ಮಾಡಲಾಗಿತ್ತು ಎಂದು ಜಾಫರ್‌ ವಿವರಿಸಿದರು.

ಸರಾಸರಿ ಬಳಕೆಗೆ ನಿರ್ದೇಶನ: ವಾರ್ಷಿಕ ನಿಗದಿಯಾದ ಮೊತ್ತದಲ್ಲಿ ಆಯಾ ತಿಂಗಳಲ್ಲಿ ಲಭ್ಯವಿರುವ ಮೊತ್ತವನ್ನು ಬಳಕೆ ಮಾಡಿಕೊಳ್ಳುವಂತೆ ಹಣಕಾಸು ಇಲಾಖೆಯು ಇತ್ತೀಚೆಗೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದೆ. ಹೆಚ್ಚು ಮೊತ್ತವನ್ನು ಬಾಕಿ ಇರಿಸಿಕೊಂಡು, ಆರ್ಥಿಕ ವರ್ಷದ ಕೊನೆಯಲ್ಲಿ ತರಾತುರಿಯಲ್ಲಿ ವೆಚ್ಚ ಮಾಡಬಾರದು ಎಂದು ಸುತ್ತೋಲೆಯಲ್ಲಿ ತಾಕೀತು ಮಾಡಲಾಗಿದೆ.

‘ಆರೋಗ್ಯ ಮತ್ತು ನಗರಾಭಿವೃದ್ಧಿ ಇಲಾಖೆಗಳು ಈಗಾಗಲೇ ಬಹುತೇಕ ಅನುದಾನ ಬಳಕೆ ಮಾಡಿವೆ.ಎರಡೂ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ನೀಡಲಾಗುವುದು’ ಎಂದು ಜಾಫರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.