ADVERTISEMENT

ನಗರ ಸಂಸ್ಥೆಗಳಿಗೆ ಕೇಂದ್ರ ಹಂಚಿದ್ದು ₹5,024 ಕೋಟಿ: ಕೊಟ್ಟಿದ್ದು ₹2,995 ಕೋಟಿ!

ಮಂಜುನಾಥ್ ಹೆಬ್ಬಾರ್‌
Published 12 ಏಪ್ರಿಲ್ 2025, 23:45 IST
Last Updated 12 ಏಪ್ರಿಲ್ 2025, 23:45 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ನವದೆಹಲಿ: 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ₹5,024 ಕೋಟಿ ಹಂಚಿಕೆ ಮಾಡಿದೆ. ಆದರೆ, ಕಳೆದೈದು ವರ್ಷಗಳಲ್ಲಿ ಬಿಡುಗಡೆ ಮಾಡಿರುವುದು ₹2,995 ಕೋಟಿ ಮಾತ್ರ. 

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಐದು ವರ್ಷಗಳಲ್ಲಿ ಹಂಚಿಕೆ ಮಾಡಿರುವುದು ₹9,667 ಕೋಟಿ. ಕೊಟ್ಟಿರುವುದು 7,677 ಕೋಟಿ. 15ನೇ ಹಣಕಾಸು ಆಯೋಗದ ಅವಧಿ 2026ರ ಮಾರ್ಚ್‌ಗೆ ಕೊನೆಗೊಳ್ಳಲಿದೆ. 2026ರ ಏ‍ಪ್ರಿಲ್‌ 1ರಿಂದ 16ನೇ ಹಣಕಾಸು ಆಯೋಗದ ಶಿಫಾರಸುಗಳು ಜಾರಿಯಾಗಲಿವೆ. 

ADVERTISEMENT

ಸಂವಿಧಾನದ 243 ಇ ವಿಧಿಯ ಅಡಿಯ ಪ್ರಕಾರ, ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯ ಸರ್ಕಾರಗಳ ಹೊಣೆ. ಹಣಕಾಸು ಆಯೋಗದ ಅನುದಾನ ಬಿಡುಗಡೆ ಸಂದರ್ಭದಲ್ಲಿ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಿಬಿಎಂಪಿ ಸದಸ್ಯರ ಅಧಿಕಾರಾವಧಿಯು 2019ರ ಸೆಪ್ಟೆಂಬರ್ 10ರಂದು ಪೂರ್ಣಗೊಂಡಿತ್ತು. ಆದರೆ, ವಾರ್ಡ್‌ ಮರುವಿಂಗಡನೆಯ ನೆಪ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಇಲ್ಲಿಯವರೆಗೆ ಚುನಾವಣೆ ನಡೆಸಿಲ್ಲ. ಸ್ಥಳೀಯ ಸಂಸ್ಥೆಗಳ ಅನುದಾನ ಖೋತಾಕ್ಕೆ ಇದೂ ಒಂದು ಕಾರಣ ಎಂದು ಮೂಲಗಳು ತಿಳಿಸಿವೆ.  

ರಾಜ್ಯಗಳ ಆದಾಯ ಮತ್ತು ವೆಚ್ಚ ನಿರ್ಣಯಿಸುವ ಸಂದರ್ಭದಲ್ಲಿ ಹಾಗೂ ರಾಜ್ಯಗಳಿಗೆ ಅನುದಾನ ವರ್ಗಾವಣೆ ಲೆಕ್ಕಾಚಾರ ಮಾಡುವ ವೇಳೆ ಆಯೋಗವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿದಂತೆ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 

‘ನಗರ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸಲು ಅಸ್ತಿತ್ವದಲ್ಲಿರುವ ಸ್ವಾವಲಂಬಿ ಕಾರ್ಯವಿಧಾನಗಳ ಹೊರತಾಗಿ ಹೆಚ್ಚುವರಿ ಆದಾಯ ಮೂಲಗಳನ್ನು ಒದಗಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಅದರೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನ, ಅಮೃತ 2.0 ಸೇರಿದಂತೆ ವಿವಿಧ ಯೋಜನೆಗಳಲ್ಲಿ ಆಸ್ತಿ ತೆರಿಗೆ ಹಾಗೂ ಬಳಕೆದಾರರ ಶುಲ್ಕ ಸಂಗ್ರಹ ಹೆಚ್ಚಿಸಲು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಜತೆಗೆ, ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ ವಿಶೇಷ ಸಹಾಯಧನ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.