ADVERTISEMENT

ಅತಿಥಿ ಉಪನ್ಯಾಸಕರು ಸಲ್ಲಿಸಿರುವ ದಾಖಲೆ ಪರಿಶೀಲಿಸಲು ಎಸ್‌ಒಪಿ: ಆದೇಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 16:03 IST
Last Updated 18 ಫೆಬ್ರುವರಿ 2026, 16:03 IST
Venugopala K.
   Venugopala K.

ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಪ್ರಕಟಿಸಿದೆ. 

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ತೇರ್ಗಡೆಯಾಗಿರಬೇಕು, ಪಿಎಚ್‌.ಡಿ ಪಡೆದಿರಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮ ರೂಪಿಸಿತ್ತು. ಹಾಗಾಗಿ, 2025–26ನೇ ಸಾಲಿನಲ್ಲಿ ಯುಜಿಸಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಳ್ಳಲಾಗಿತ್ತು.

ನೇಮಕವಾದ ಹಲವು ಅತಿಥಿ ಉಪನ್ಯಾಸಕರು ಸಲ್ಲಿಸಿದ್ದ ಪಿಎಚ್‌.ಡಿ ಸೇರಿದಂತೆ ಇತರೆ ಪ್ರಮಾಣಪತ್ರಗಳು ನಕಲಿಯಾಗಿವೆ ಎಂಬ ದೂರುಗಳು ಕೇಳಿ ಬಂದ ಕಾರಣ ಎಲ್ಲ ಕಾಲೇಜುಗಳಲ್ಲೂ ಪ್ರಮಾಣಪತ್ರಗಳ ನೈಜತೆಯನ್ನು ದೃಢೀಕರಿಸಿಕೊಳ್ಳಲು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಎಸ್‌ಒಪಿ ಅಳವಡಿಸಿಕೊಳ್ಳಲು ಆದೇಶ ಹೊರಡಿಸಲಾಗಿದೆ. 

ADVERTISEMENT

ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪಡೆದ ಪ್ರಮಾಣಪತ್ರಗಳನ್ನಷ್ಟೇ ಪರಿಗಣಿಸಬೇಕು. ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ಖಚಿತಪಡಿಸಿಕೊಳ್ಳಬೇಕು. ಪತ್ರ ವ್ಯವಹಾರಗಳನ್ನು ಗೋಪ್ಯವಾಗಿಡಬೇಕು.  ಪಿಎಚ್‌.ಡಿಗಳ ನೈಜತೆಗೆ ವಿಶೇಷ ಗಮನಕೊಡಬೇಕು. ಆಯಾ ವಿಶ್ವವಿದ್ಯಾಲಯಗಳ ಪ್ರಕಟಣೆ, ಪಿಎಚ್‌.ಡಿ ಪ್ರವೇಶ, ಸಂಶೋಧನೆ, ಮಾರ್ಗದರ್ಶಕರ ವಿವರ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ವಿವರ ಕಲೆಹಾಕಬೇಕು. ನಕಲಿ ಎನ್ನುವುದು ಸಾಬೀತಾದರೆ ಅಂತಹ ಅತಿಥಿ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆ ಮಾಡಬೇಕು. ಎಲ್ಲ ವಿವರಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.