ADVERTISEMENT

ರಾಜ್ಯದ ವಿವಿಧೆಡೆ ಕೋಡಿಬಿದ್ದ ಕೆರೆಗಳು: ಭರ್ತಿಯತ್ತ ಅಣೆಕಟ್ಟೆಗಳು, ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 16:10 IST
Last Updated 18 ಆಗಸ್ಟ್ 2025, 16:10 IST
<div class="paragraphs"><p>ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯ ಭರ್ತಿ ಆಗಿದ್ದು, ನೀರು ನದಿಗೆ ಧುಮ್ಮಿಕ್ಕುತ್ತಿದ್ದ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ </p></div>

ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯ ಭರ್ತಿ ಆಗಿದ್ದು, ನೀರು ನದಿಗೆ ಧುಮ್ಮಿಕ್ಕುತ್ತಿದ್ದ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

   

ಚಿತ್ರ ಕೃಪೆ: ಕರ್ನಾಟಕ ನೀರಾವರಿ ನಿಗಮ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ ಮಳೆ ಅಬ್ಬರಿಸಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗುಪ್ರದೇಶಗಳು, ಜಮೀನುಗಳು ಜಲಾವೃತಗೊಂಡಿವೆ. ಹಲವೆಡೆ ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಮುಂಜಾಗ್ರತೆಯಾಗಿ ಜಲಾಶಯಗಳಿಂದ ಹೊರಹರಿವಿನ ಪ್ರಮಾಣ ಹೆಚ್ಚಿಸಿದ್ದು, ನದಿಪಾತ್ರದ ಪ್ರದೇಶಗಳಲ್ಲಿ ಆತಂಕದ ಸ್ಥಿತಿ ಮೂಡಿದೆ.

ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಕೊಡಗು, ದಾವಣಗೆರೆ ಚಿತ್ರದುರ್ಗ ಜಿಲ್ಲೆಯಾಂದ್ಯಂತ, ಹಾಗೂ ಬೀದರ್ ಜಿಲ್ಲೆಯ ಔರಾದ್‌ ತಾಲ್ಲೂಕಿನಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಮಂಗಳವಾರವೂ ರಜೆ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ರಾಜಾ ಲಖಮಗೌಡ ಜಲಾಶಯ (ಹಿಡಕಲ್‌) ಭರ್ತಿಯಾಗಿದ್ದು, ಸವದತ್ತಿಯ ನವಿಲುತೀರ್ಥ ಜಲಾಶಯ ಭರ್ತಿಗೆ ಒಂದೂವರೆ ಅಡಿ ಬಾಕಿ ಇದೆ. 

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಿಂದಾಗಿ ಕೃಷ್ಣಾ ನದಿಯ ನೀರಿನ ಮಟ್ಟ ಏರಿದೆ. ಕಲ್ಲೋಳ– ಡೂರ ಸೇತುವೆ, ಮಲಿಕವಾಡ– ದತ್ತವಾಡ ಸೇತುವೆಗಳು ಜಲಾವೃತಗೊಂಡಿವೆ.

ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಭಾರಿ ವರ್ಷಧಾರೆಯಾಗಿದೆ.

ಬೀದರ್ ಜಿಲ್ಲೆಯ ಮಾಂಜ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಔರಾದ್‌ ತಾಲ್ಲೂಕಿನ ಬೊಂತಿ ಗ್ರಾಮದ ಕೆರೆ ಒಡೆದು ಗ್ರಾಮಗಳಿಗೆ ನೀರು ನುಗ್ಗಿದೆ. 15 ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. 

ಯಾದಗಿರಿ ಜಿಲ್ಲೆಯಲ್ಲಿ ಹಲವು ಕೆರೆಗಳು, ಹಳ್ಳ–ಕೊಳ್ಳಗಳು ಕೋಡಿಬಿದ್ದಿವೆ. ಹತ್ತಿಕುಣಿ ಜಲಾಶಯ ತುಂಬಿದೆ. ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದೆ.

ಹಾಸನ ಮತ್ತು ಕೊಡಗಿನಲ್ಲಿ ಮಳೆ ಮುಂದುವರಿದಿದೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆಗೋಡೆ ಕುಸಿದಿದೆ. 

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ, ಗೋಸಾಯಿಘಾಟ್‌, ನಿಮಿಷಾಂಬ ದೇವಾಲಯ ಭಾಗಶಃ ಮುಳುಗಿವೆ. ಸಾಯಿಬಾಬಾ ಆಶ್ರಮಕ್ಕೆ ನೀರು ನುಗ್ಗಿದೆ. ಸ್ವಾಮೀಜಿ ಜಲದಿಗ್ಬಂಧನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.