ಬೆಂಗಳೂರು: ‘ಭಾರತೀಯರನ್ನು ಭಾರತೀಯರು ಎಂದು ನೋಡದೆ, ಆ ಜಾತಿ, ಈ ಜಾತಿ ಎಂದು ನೋಡುತ್ತಿರುವುದೇ ಸಮಸ್ಯೆಯ ಮೂಲವಾಗಿದೆ. ರಾಜಕೀಯ ಪಕ್ಷಗಳು, ಸಮಾಜದ ಒಂದು ಸಮುದಾಯದ ಜನರನ್ನು ಮಾತ್ರವೇ ಓಲೈಕೆ ಮಾಡುತ್ತಿರುವ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
‘ನನ್ನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಯತ್ನಾಳ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಪಿ.ದಳವಾಯಿ, ‘ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿ ಮಾತ್ರ ದಸರಾ ಉದ್ಘಾಟಿಸಬೇಕು. ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ದಸರಾ ಉದ್ಘಾಟಿಸುವಂತಿಲ್ಲ ಎಂದು ಅರ್ಜಿದಾರರು ಹೇಳಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ’ ಎಂದು ಆಕ್ಷೇಪಿಸಿದರು. ಈ ಸಂಬಂಧ ಯತ್ನಾಳ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಪೆನ್ ಡ್ರೈವ್ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪ್ರಾಸಿಕ್ಯೂಷನ್‌ನ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ಮತ್ತು ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ವಿಶ್ವವೇ ಇಂದು ಜಾಗತಿಕ ಗ್ರಾಮವಾಗಿದೆ. ಮನುಷ್ಯರನ್ನು ಮನುಷ್ಯರು ಎಂದು ಪರಿಗಣಿಸುವುದನ್ನು ಅರ್ಜಿದಾರರು ಕಲಿಯಬೇಕಿದೆ’ ಎಂದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಮೌಖಿಕವಾಗಿ ಕಳವಳ ವ್ಯಕ್ತಪಡಿಸಿತಲ್ಲದೆ, ‘ಪೊಲೀಸರು ಯತ್ನಾಳ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು. ಯತ್ನಾಳ ತನಿಖೆಗೆ ಸಹಕರಿಸಬೇಕು’ ಎಂದು ಆದೇಶಿಸಿತು. ಅಂತೆಯೇ, ಯತ್ನಾಳ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣವೇನು?: ಯತ್ನಾಳ ಅವರು, ‘ದಸರಾದಲ್ಲಿ ಚಾಮುಂಡಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂವು ಮುಡಿಸಬೇಕು. ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ–1989ರ ಕಲಂ 1 (ಎಸ್) ಮತ್ತು ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 352ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಜಾತಿ ಸಮೀಕ್ಷೆ ವಿರುದ್ಧ ‘ಜಾಗೃತಿ ವಕೀಲರ ವೇದಿಕೆ’ ವತಿಯಿಂದ ವಕೀಲರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಬುಧವಾರ ಶಾಂತಿಯುತ ಪ್ರತಿಭಟನೆ ನಡೆಸಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಇತರರು ಇದ್ದರು
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಲು ಉದ್ದೇಶಿಸಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಪದಾಂಕಿತ ಹಿರಿಯ ವಕೀಲರೂ ಆದ ಕೆ.ಎನ್.ಸುಬ್ಬಾರೆಡ್ಡಿ ಸೇರಿದಂತೆ ಒಟ್ಟು ನಾಲ್ವರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ಆಯೋಗದ ಅಧ್ಯಕ್ಷ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಮತ್ತು ಭಾರತ ಜನಗಣತಿ ಆಯೋಗ ಹಾಗೂ ರಿಜಿಸ್ಟ್ರಾರ್ ಜನರಲ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಕೋರಿಕೆ ಏನು?: ‘ಸರ್ಕಾರವು 1500 ಜಾತಿಗಳು ಮತ್ತು ಉಪಜಾತಿಗಳನ್ನು ಸೂಕ್ತ ರೀತಿಯಲ್ಲಿ ವರ್ಗೀಕರಣ ಮಾಡದೆ ಒಂದರೊಳಗೊಂದು ಮಿಶ್ರಣ ಮಾಡಿದೆ. ಇದು ಕಾನೂನು ವಿರೋಧಿ ಅಧಿಕಾರ ವ್ಯಾಪ್ತಿ ಮೀರಿದ ಏಕಪಕ್ಷೀಯ ಮತ್ತು ಕಾನೂನು ಉಲ್ಲಂಘನೆಯ ನಡೆಯಾಗಿದೆ. ಅಷ್ಟಕ್ಕೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ (ಜಾತಿವಾರು ಸಮೀಕ್ಷೆ) ನಡೆಸುವ ಅಧಿಕಾರ ಇಲ್ಲ. ಹಾಗಾಗಿ ಸರ್ಕಾರ ನಡೆಸಲು ಉದ್ದೇಶಿಸಿರುವ ಈ ಗಣತಿಯನ್ನು ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.