ADVERTISEMENT

ಶಾಸಕ ಸೈಲ್‌ ಜಾಮೀನು: ವರದಿ ನೀಡಲು ಏಮ್ಸ್‌ಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 18:22 IST
Last Updated 13 ಜನವರಿ 2026, 18:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಆಸ್ಪತ್ರೆಯಲ್ಲಿರುವ ಅಗತ್ಯವಿದೆಯೇ ಅಥವಾ ಅವರಿಗೆ ಕಸ್ಟಡಿಯಲ್ಲೇ ಚಿಕಿತ್ಸೆ ನೀಡಬಹುದೇ ಎಂಬ ಬಗ್ಗೆ ವರದಿ ನೀಡಿ’ ಎಂದು ಹೈಕೋರ್ಟ್‌, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ನಿರ್ದೇಶಿಸಿದೆ.

ಈ ಸಂಬಂಧ ಸತೀಶ್‌ ಸೈಲ್‌ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸತೀಶ್ ಸೈಲ್ ಪರ ವಕೀಲರು, ಏಮ್ಸ್ ವೈದ್ಯರು ಇದೇ 21ರಂದು ವೈದ್ಯಕೀಯ ತಪಾಸಣೆಗೆ ಒಳಗಾಗಲು ಅರ್ಜಿದಾರರಿಗೆ ಸೂಚಿಸಿದ್ದಾರೆ’ ಎಂದು ನ್ಯಾಯಪೀಠಕ್ಕೆ ಅರುಹಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಈಗಾಗಲೇ ಮಂಜೂರು ಮಾಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ವಿಸ್ತರಿಸಿ ಆದೇಶಿಸಿತು.

ADVERTISEMENT

ಕೋರಿಕೆ ಏನು?: ‘ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ ದಾಖಲಿಸಿರುವ ಇಸಿಐಆರ್‌ಗೆ (ಜಾರಿ ನಿರ್ದೇಶನಾಲಯ ಪ್ರಕರಣದ ಮಾಹಿತಿ ವರದಿ) ಸಂಬಂಧಿಸಿದಂತೆ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಜನಪ್ರತಿನಿಧಿಗಳ ಸೆಷೆನ್ಸ್‌ ನ್ಯಾಯಾಲಯ ರದ್ದುಪಡಿಸಿದೆ ಹಾಗೂ ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿದೆ. ನಾನು ಜಠರ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಿಯಮಿತ (ರೆಗ್ಯುಲರ್‌) ಜಾಮೀನು ನೀಡಬೇಕು’ ಎಂದು ಸೈಲ್‌ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.