ADVERTISEMENT

ಹಿಜಾಬ್ ವಿವಾದ ರಾಜ್ಯದಾದ್ಯಂತ ವ್ಯಾಪಿಸಲು ಕಾಂಗ್ರೆಸ್ ನೇರ ಹೊಣೆ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2022, 12:41 IST
Last Updated 8 ಫೆಬ್ರುವರಿ 2022, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸದ್ಯ ರಾಜ್ಯದಲ್ಲಿ ತಾರಕಕ್ಕೇರಿರುವ ಹಿಜಾಬ್ ವಿವಾದ ಭಾರತದಲ್ಲಿ ಧಾರ್ಮಿಕ ಅಸಹನೆ ಇದೆ ಎಂಬ ಸುಳ್ಳು ಪ್ರತಿಪಾದಿಸುವ ಯೋಜಿತ ಸಂಚು. ಉಡುಪಿಯಲ್ಲಿ ಆರಂಭವಾದ ವಿವಾದ ರಾಜ್ಯದಾದ್ಯಂತ ವ್ಯಾಪಿಸಲು ಕಾಂಗ್ರೆಸ್ ನೇರ ಹೊಣೆ ಎಂದು ಬಿಜೆಪಿ ದೂರಿದೆ.

ಈ ವಿಚಾರವಾಗಿ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

’ಹಿಜಾಬ್ ವಿವಾದ ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಇದನ್ನು ಅಂತರರಾಷ್ಟ್ರೀಯ ಸುದ್ದಿಯಾಗಿ ಪ್ರಕಟಿಸಲಾಯಿತು. ಭಾರತದಲ್ಲಿ ಧಾರ್ಮಿಕ ಅಸಹನೆ ಇದೆ ಎಂಬ ಸುಳ್ಳು ವಿಚಾರವನ್ನು ಪ್ರತಿಷ್ಠಾಪಿಸುವ ಯೋಜಿತ ಸಂಚು ಇದಲ್ಲವೇ? ಈ ಟೂಲ್ ಕಿಟ್‌ನ ಹಿಂದಿರುವ ರಾಷ್ಟ್ರ ವಿರೋಧಿ ಶಕ್ತಿಗಳ ಹೆಸರು ಬಹಿರಂಗವಾಗಲಿ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ADVERTISEMENT

‘ಹಿಜಾಬ್ ನಮ್ಮ ಮೂಲಭೂತ ಹಕ್ಕು ಎಂದು ವಾದಿಸುತ್ತಿರುವ ಕೆಲವೇ ವಿದ್ಯಾರ್ಥಿಗಳು ಈ ಹಿಂದೆ ಸಮವಸ್ತ್ರದಲ್ಲಿಯೇ ಕಾಲೇಜಿಗೆ ಬರುತ್ತಿದ್ದರು. ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸುವಾಗ ಹಿಜಾಬ್ ಅಗತ್ಯ ಕಾಣಲಿಲ್ಲ. ಹಾಗಾದರೆ, ಈಗಿನ ಪ್ರತಿಭಟನೆಯ ಹಿಂದಿನ ಉದ್ದೇಶವೇನು’ ಎಂದು ಬಿಜೆಪಿ ಪ್ರಶ್ನಿಸಿದೆ.

ಹಿಜಾಬ್ ಪ್ರಕರಣದ ದುರುದ್ದೇಶ, ಜಾತ್ಯತೀತ ಹೆಸರಿನಲ್ಲಿನ ಮುಖವಾಡ ಎರಡೂ ಕಳಚಿ ಬೀಳುವ ಸಮಯವಿದು. ಮುಸ್ಲಿಂ ಮಹಿಳೆಯರ ಹಕ್ಕಿನ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರು, ಇದೇ ಮಹಿಳೆಯರು ತ್ರಿವಳಿ ತಲಾಖ್‌ನಿಂದ ಎದುರಿಸುವ ದೌರ್ಜನ್ಯದ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ.

ಉಡುಪಿ, ಕುಂದಾಪುರಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ ಈಗ ರಾಜ್ಯದ ಇತರೆ ಜಿಲ್ಲೆಗಳಿಗೆ ವ್ಯಾಪಿಸಿದೆ. ಕೋರ್ಟ್ ಮೆಟ್ಟಿಲೇರಿದೆ. ಈ ವಿವಾದವನ್ನು ತನ್ನ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಹವಣಿಸುತ್ತಿದೆ. ನೆರೆಮನೆಗೆ ಬೆಂಕಿ ಬಿದ್ದಾಗ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ ಎಂದು ಕೇಸರಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಆರಂಭದಲ್ಲಿ ಕೇವಲ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದು, ಸಮವಸ್ತ್ರ ನಿಯಮ ಉಲ್ಲಂಘಿಸಿದರು. ಇವರಿಗೆ ಪ್ರಚೋದನೆ ನೀಡಿದ ಪರಿಣಾಮ, ಈಗ ಇಡೀ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿವಾದ ಹಬ್ಬಿದೆ. ಸಿದ್ದರಾಮಯ್ಯ ಅವರ ‘ಹಿಜಾಬ್ ಮೂಲಭೂತ ಹಕ್ಕು’ ಎಂಬ ಪ್ರಚೋದನೆಯೇ ಇದಕ್ಕೆ ನೇರ ಕಾರಣ ಎಂದು ಟ್ವೀಟ್‌ನಲ್ಲಿ ದೂರಲಾಗಿದೆ.

‘ವಿದ್ಯಾರ್ಥಿಗಳಲ್ಲಿ ಮತೀಯವಾದವನ್ನು ಬಲವಂತವಾಗಿ ಹೇರುವ ಮೂಲಭೂತವಾದಿಗಳ ಹತಾಶೆಯ ಹಳಹಳಿಕೆ ಹಿಜಾಬ್ ವಿವಾದದ ಹಿಂದೆ ಇದೆ. ರಾಹುಲ್ ಗಾಂಧಿಯಂತಹ ವಿಫಲ ನಾಯಕರು ಕೂಡಾ ಇದನ್ನು ಬೆಂಬಲಿಸುತ್ತಾರೆ ಎಂದರೆ ಇದು ಕಾಂಗ್ರೆಸ್ ಪ್ರಾಯೋಜಿತ ನಾಟಕ ಎಂಬುದರಲ್ಲಿ ಅನುಮಾನವಿದೆಯೇ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘1983ರ ಶಿಕ್ಷಣ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರು ಹಿಜಾಬ್‌ ಒಳಗಿರುವ ಮತ ಪಡೆಯಲು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎನ್ನುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಅವಾಂತರಗಳಿಗೆ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು’ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯದಲ್ಲಿ ಹಿಜಾಬ್ ವಿವಾದ ತೀವ್ರಗೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರೌಢ ಶಾಲೆ, ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿದ್ದಾರೆ. ಶಾಂತಿ–ಸೌಹಾರ್ದತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.