ADVERTISEMENT

ಮಹಿಳಾ ಪೊಲೀಸರ ಸಂಖ್ಯೆ ಶೇ 25ಕ್ಕೆ ಹೆಚ್ಚಿಸಲು ಕ್ರಮ: ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 6:31 IST
Last Updated 28 ಸೆಪ್ಟೆಂಬರ್ 2021, 6:31 IST
ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್  ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡರು
ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡರು   

ಮೈಸೂರು: ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೊಲೀಸರಿಗೆ ಹೃದಯವಂತಿಕೆ ಬೇಕೇ ಹೊರತು ಕಠಿಣ ನಿರ್ಧಾರಗಳಲ್ಲ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಮಂಗಳವಾರ ತಿಳಿಸಿದರು.

ಪೊಲೀಸ್ ತರಬೇತಿ ಶಾಲೆ ಜ್ಯೋತಿ ನಗರ ಇಲ್ಲಿ 6ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಮಹಿಳೆ ಅಬಲೆ ಅಂತ ಹೇಳಿದರು, ಯಾಕಾಗಿ ಹೇಳಿದರು ಅಂತ ಈ ಪರೇಡ್ ಸಂದರ್ಭದಲ್ಲಿ ಪ್ರಶ್ನಾರ್ಥಕ ಚಿಹ್ನೆ ನನ್ನಲ್ಲಿ ಮೂಡಿತು. ನಾನು ಅಬಲೆಯಲ್ಲ, ಸಬಲೆ ನನ್ನನ್ನು ನಾನು ರಕ್ಷಣೆ ಮಾಡಿಕೊಂಡು ಸಮಾಜವನ್ನು, ಸಮುದಾಯವನ್ನು ರಕ್ಷಣೆ ಮಾಡುವ ಯೋಗ್ಯತೆ ಪಡೆದಿದ್ದೇನೆಂದು ಎದೆ ತಟ್ಟಿ ಹೇಳುವ ವಾತಾವರಣ ಈ ಪರೇಡ್ ಮೈದಾನದಲ್ಲಿ ಕಂಡು ಬಂತು’ ಎಂದು ಅವರು ಹೇಳಿದರು.

ADVERTISEMENT

‘ವೈರಿ ರಾಷ್ಟ್ರಗಳಿಂದ ಬರುವ ಶತ್ರುಗಳನ್ನು ದಮನ ಮಾಡಲು ನಮ್ಮ ಸೇನಾ ಪಡೆ ಸನ್ನದ್ಧವಾಗಿದೆ. ಆದರೆ ವಿವಿಧ ಧರ್ಮ, ಮತ, ಪಂಥ ಭಾಷೆ ಇವೆಲ್ಲವೂ ಇರುವ ದೇಶದ ಆಂತರಿಕ ರಕ್ಷಣೆಯನ್ನು ಪೊಲೀಸರು ಮಾಡಬೇಕು. ಪೊಲೀಸರು ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಿ ನಾಗರಿಕರ ಮಾನ, ಪ್ರಾಣ, ಸ್ವತ್ತು ಕಾಪಾಡುವ ಬಹಳ ದೊಡ್ಡ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ’ ಎಂದು ಸಚಿವರು ಶ್ಲಾಘಿಸಿದರು.

‘ಪೊಲೀಸರು ಅಂದ ತಕ್ಷಣ ಪುರುಷರು ಅನ್ನುವ ಪರಿಕಲ್ಪನೆ ನಿರ್ಮಾಣವಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳಾ ಸಿಬ್ಬಂದಿಯನ್ನು ಪೊಲೀಸ್ ಪಡೆಯಲ್ಲಿ ನೇಮಕ ಮಾಡಿಕೊಳ್ಳುವ ಪಾಲಿಸಿ ತಂದಿದೆ. ಶೇ 25 ಪಾಲು ಮಹಿಳೆಯರು ಪೊಲೀಸ್ ಪಡೆಯಲ್ಲಿ ಇರಬೇಕು. ರಾಜ್ಯದಲ್ಲಿ ಶೇ 10ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದಾರೆ. ಕ್ರಮೇಣ ಇದನ್ನು ಶೇ 25ಕ್ಕೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ’ ಎಂದರು.

ಜನರ ಮನಸ್ಸಿನಲ್ಲಿ ಪೊಲೀಸ್ ಎಂದರೆ ಭಯ ಇರಬಾರದು. ಸಾಮಾನ್ಯ ಜನರಿಗೆ ಪೊಲೀಸ್ ಎಂದರೆ ನಮ್ಮ ರಕ್ಷಕರು ಸ್ನೇಹಿತರು ಎನ್ನುವ ಭಾವನೆ ಇರಬೇಕು. ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಭಯ ಇರಬೇಕೇ ಹೊರತು ಸಾಮಾನ್ಯರಿಗಲ್ಲ. ಠಾಣೆಗೆ ಬಂದ ಸಾಮಾನ್ಯ ಜನರನ್ನು ಗೌರವಿಸಬೇಕು. ಸಾಮಾನ್ಯ ನಾಗರಿಕ ಸ್ನೇಹಿಯಾಗಿ ನಡೆದುಕೊಳ್ಳಬೇಕು. ಸಾಮಾನ್ಯರಿಂದ ಇಂತಹ ಅಪೇಕ್ಷೆ ಇದೆ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.