ADVERTISEMENT

37 ಲಕ್ಷ ಕುಟುಂಬಕ್ಕಿಲ್ಲ ಸೂರು: ರಾಜ್ಯ ಸರ್ಕಾರ ನಡೆಸಿದ್ದ ಸಮೀಕ್ಷೆ

ಬೆಳೆಯುತ್ತಿರುವ ವಸತಿಹೀನರ ಸಂಖ್ಯೆ

ಚಂದ್ರಹಾಸ ಹಿರೇಮಳಲಿ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಕನ್ನಡ ಮಾತನಾಡುವ ಪ್ರದೇಶಗಳನ್ನು ಒಳಗೊಂಡ ಕರ್ನಾಟಕ ಉದಯವಾಗಿ ಏಳು ದಶಕಗಳು ಕಳೆದರೂ ರಾಜ್ಯದಲ್ಲಿ ವಾಸಿಸುವ 37.48 ಲಕ್ಷ ಕುಟುಂಬಗಳಿಗೆ ಸ್ವಂತ ಸೂರು ಇಲ್ಲ. 

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಎಲ್ಲ ಸರ್ಕಾರಗಳೂ ಬಡತನ ನಿರ್ಮೂಲನೆಗಾಗಿ ರೂಪಿಸಿದ ಕಾರ್ಯಕ್ರಮಗಳಲ್ಲಿ ವಸತಿ ಯೋಜನೆಗಳಿಗೆ ಆದ್ಯತೆ ನೀಡಿವೆ. ಆದರೂ ವಸತಿಹೀನರ ಸಂಖ್ಯೆ ಬೆಳೆಯುತ್ತಲೇ ಇದೆ.

ADVERTISEMENT

ವಸತಿ ರಹಿತರಿಗೆ ‘ಸೂರು’ ಕಲ್ಪಿಸಲು ಬಸವ ವಸತಿ ಯೋಜನೆ, ಡಾ.ಬಿ.ಆರ್‌.ಅಂಬೇಡ್ಕರ್‌ ನಗರ ಮತ್ತು ಗ್ರಾಮೀಣ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿದೆ. ಅತಿವೃಷ್ಟಿ, ನೆರೆಯಿಂದ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗುವ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಪುನರ್‌ವಸತಿ ಕಲ್ಪಿಸಲು ದೇವರಾಜ ಅರಸು ಅವರ ಹೆಸರಿನಲ್ಲಿ ಪ್ರತ್ಯೇಕ ವಸತಿ ಯೋಜನೆ ಜಾರಿಗೊಳಿಸಲಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ವಸತಿ ರಹಿತರಿಗೆ ಬಹುಮಹಡಿ ವಸತಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಸರ್ಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳ ವಸತಿ ರಹಿತರಿಗಾಗಿಯೇ ಪ್ರತ್ಯೇಕ ಪ್ರಧಾನಮಂತ್ರಿ ಆವಾಸ್‌ ಯೋಜನೆ ರೂಪಿಸಿದೆ. ಪಿಎಂ–ಜನಮನ್‌ ಯೋಜನೆ ಅಡಿಯೂ ಮನೆಗಳನ್ನು ಮಂಜೂರು ಮಾಡುತ್ತಿದೆ. 

ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರ ನಡೆಸಿದ್ದ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ವಸತಿ ಇಲ್ಲದ 37.48 ಲಕ್ಷ ಜನರಲ್ಲಿ 17.31 ಲಕ್ಷ ಜನರಿಗೆ ಸ್ವಂತ ನಿವೇಶನವೂ ಇಲ್ಲ. 20.17 ಲಕ್ಷ ಜನರು ಸಾಲ ಮಾಡಿ ಸ್ವಂತ ನಿವೇಶನಗಳನ್ನು ಖರೀದಿಸಿದ್ದರೂ ಸ್ವಂತ ಸೂರು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳ ಅಡಿ 2024–25ನೇ ಸಾಲಿನಲ್ಲಿ 7.38 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. 3.27 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇನ್ನೂ 4.11 ಲಕ್ಷ ಮನೆಗಳ ಅನುಮೋದನೆ ಬಾಕಿ ಇದೆ. 2025–26ನೇ ಹಣಕಾಸು ವರ್ಷ ಮುಗಿಯುತ್ತಾ ಬಂದರೂ ಅನುಮೋದನೆ ನೀಡಿದ ಮನೆಗಳಲ್ಲಿ ಪೂರ್ಣಗೊಂಡಿರುವುದು 9,839 ಮನೆಗಳು ಮಾತ್ರ. 46,540 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2.70 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಇದುವರೆಗೂ ಆರಂಭವಾಗಿಲ್ಲ. 

ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ 2024–25 ರಲ್ಲಿ ರಾಜ್ಯದಲ್ಲಿ 2.74 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 4,443 ಮನೆಗಳು ಮಾತ್ರ ನಿರ್ಮಾಣವಷ್ಟೇ ಪೂರ್ಣವಾಗಿವೆ. 

37.48 ಲಕ್ಷ

ವಸತಿ ರಹಿತ ಕುಟುಂಬಗಳು

24.19 ಲಕ್ಷ

ಗ್ರಾಮೀಣ ವಸತಿ ರಹಿತ ಕುಟುಂಬಗಳು

13.29 ಲಕ್ಷ

ನಗರ ವಸತಿ ರಹಿತ ಕುಟುಂಬಗಳು

ಮನೆಗಳ ಅಪೂರ್ಣಕ್ಕೆ ಹಲವು ಕಾರಣ

* ಆಶ್ರಯ ಯೋಜನೆಗಳಲ್ಲಿ ಮನೆಗಳ ನಿರ್ಮಾಣ ಕಾರ್ಯಗಳು ನಿರೀಕ್ಷೆಯಂತೆ ಅನುಷ್ಠಾನಗೊಳ್ಳದೇ ಇರಲು ಪ್ರಮುಖ ಕಾರಣ ಸರ್ಕಾರ ನೀಡುವ ಕಡಿಮೆ ವಂತಿಗೆ ಮತ್ತು ವಂತಿಗೆ ನೀಡುವಲ್ಲಿನ ವಿಳಂಬ.

* ಪ್ರತಿ ಮನೆಗಳ ನಿರ್ಮಾಣಕ್ಕೆ ಸರ್ಕಾರ ₹1.20 ಲಕ್ಷ ನಿಗದಿ ಮಾಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ₹20,000 ಭರಿಸಲಾಗುತ್ತದೆ. ಅಲ್ಲಿಗೆ ಒಂದು ಮನೆಯ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಭರಿಸುವ ವೆಚ್ಚ ₹1.40 ಮಾತ್ರ. ಉಳಿದ ಮೊತ್ತವನ್ನು ಫಲಾನುಭವಿಗಳು ಭರಿಸಬೇಕಿದೆ.

* ‘ಸರ್ಕಾರ ನೀಡುವ ಮೊತ್ತವೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಹಣ ಬಿಡುಗಡೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ’ ಎನ್ನುತ್ತಾರೆ ವಸತಿ ಯೋಜನೆ ಹೋರಾಟ ಸಮಿತಿ ಕಾರ್ಯದರ್ಶಿ ನಿರಂಜನ್‌. 

* ‘ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬ, ನಿವೇಶನಗಳ ಪಕ್ಕಾ ದಾಖಲೆಗಳ ಕೊರತೆ, ಸಾಲ ಮಂಜೂರಾತಿ ವಿಳಂಬ ಮತ್ತಿತರ ಸಮಸ್ಯೆಗಳಿಂದ ಮನೆಗಳ ನಿರ್ಮಾಣ ಕಾರ್ಯ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಬಡತನದ ರೇಖೆಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ಸರ್ಕಾರವೇ ಸಂಪೂರ್ಣ ಮೊತ್ತ ಪಾವತಿಸಿ ಮನೆ ನಿರ್ಮಾಣ ಮಾಡಿಕೊಡಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್‌. 

ಕಾಂಗ್ರೆಸ್‌ ಆಡಳಿತವಿದ್ದ 2013–18ರ ಅವಧಿಯಲ್ಲಿ 13 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಒಂದೂ ಮನೆ ನೀಡಲಿಲ್ಲ. ಈಗ ಮತ್ತೆ 7.38 ಲಕ್ಷ ಮನೆ ನೀಡಿದ್ದೇವೆ
ಜಮೀರ್‌ ಅಹಮದ್‌ ಖಾನ್‌, ವಸತಿ ಸಚಿವ
ಫಲಾನುಭವಿಗಳ ಆಯ್ಕೆಯನ್ನು ನಿಯಮದಂತೆ ಆಯಾ ಗ್ರಾಮ, ವಾರ್ಡ್‌ ಸಭೆಗಳಿಗೆ ನೀಡಬೇಕು. ಶಾಸಕರ, ಅಧಿಕಾರಿಗಳ ಹಸ್ತಕ್ಷೇಪ ತಡೆಯಬೇಕು. ಆಗ  ನಿಜವಾದ ಫಲಾನುಭವಿಗಳಿಗೆ ಸೂರು ಸಿಗುತ್ತವೆ  
ಕಾಡಶೆಟ್ಟಿಹಳ್ಳಿ ಸತೀಶ್‌, ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.