ADVERTISEMENT

ಬಡ್ತಿಯಲ್ಲೂ ಒಳಮೀಸಲಾತಿ; ಆತಂಕ ಬೇಡ: ಆಂಜನೇಯ ನೇತೃತ್ವದ ನಿಯೋಗಕ್ಕೆ ಶಾಲಿನಿ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 16:04 IST
Last Updated 12 ಸೆಪ್ಟೆಂಬರ್ 2025, 16:04 IST
ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ನಿಯೋಗ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿತು. 
ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ನಿಯೋಗ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿತು.    

ಬೆಂಗಳೂರು: ಒಳಮೀಸಲಾತಿ ಜಾರಿಗೊಂಡ ತಕ್ಷಣವೇ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಬಡ್ತಿಗೂ ಅನ್ವಯವಾಗಲಿದ್ದು ಆತಂಕ ಬೇಡ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು. 

ಮಾದಿಗ ಮತ್ತಿತರ ಸಮುದಾಯದಲ್ಲಿ ಮನೆ ಮಾಡಿರುವ ಆತಂಕ ದೂರ ಮಾಡುವಂತೆ ಕೋರಿ ತಮ್ಮನ್ನು ಭೇಟಿ ಮಾಡಿದ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ನಿಯೋಗಕ್ಕೆ ಈ ಭರವಸೆ ನೀಡಿದ ಶಾಲಿನಿ, ‘ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ಈ ವಿಷಯದಲ್ಲಿ ಆತಂಕ ಬೇಡ’ ಎಂದು ತಿಳಿಸಿದರು. 

‘ಶಿಕ್ಷಣ, ಉದ್ಯೋಗಕ್ಕೆ ಅನ್ವಯವಾಗುವ ರೀತಿ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಅದೇ ರೀತಿ ಬಡ್ತಿಯಲ್ಲೂ ಒಳಮೀಸಲಾತಿ ಜಾರಿಗೊಳಿಸಬೇಕು. ಬಡ್ತಿಗೆ ಒಳ ಮೀಸಲಾತಿ ಅನ್ವಯಿಸುವುದಿಲ್ಲವೆಂಬ ಸಂಶಯ ಇದೆ. ಈ ಗೊಂದಲ ನಿವಾರಣೆಗೆ ತಕ್ಷಣ ಮುಂದಾಗಬೇಕು. ಆದೇಶ ಹೊರಡಿಸಬೇಕು’ ಎಂದು ನಿಯೋಗ ಆಗ್ರಹಿಸಿತು.

ADVERTISEMENT

ಬಳಿಕ ಮಾತನಾಡಿದ ಎಚ್.ಆಂಜನೇಯ, ‘ದೀರ್ಘ ಹೋರಾಟದ ಫಲವಾಗಿ ಎ, ಬಿ, ಸಿ ಗುಂಪುಗಳಾಗಿ ವಿಂಗಡಿಸಿ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಮಾದಿಗ ಸಮುದಾಯದ ಸರ್ಕಾರಿ ನೌಕರರು ಯಾವುದೇ ರೀತಿ ಆತಂಕ ಪಡಬೇಕಿಲ್ಲ. ಶೀಘ್ರದಲ್ಲೇ ಒಳಮೀಸಲಾತಿ ಬಡ್ತಿಗೂ ಅನ್ವಯಿಸಲಿದೆ ಎಂಬ ಆದೇಶ ಹೊರಬೀಳಲಿದೆ. ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಆಗಿದೆ. ಅದೇ ಪದ್ಧತಿ ರಾಜ್ಯದಲ್ಲೂ ಜಾರಿಗೊಳ್ಳಲಿದೆ. ಆದ್ದರಿಂದ ನಿಶ್ಚಿಂತೆಯಿಂದ ಇರಬಹುದು ಎಂದರು.

ಮಾಜಿ ಶಾಸಕ ತಿಮ್ಮರಾಯಪ್ಪ, ಒಳಮೀಸಲಾತಿ ಹೋರಾಟಗಾರರಾದ ಮಾರಪ್ಪ, ಅರೋಲಿಕರ್ ಅಂಬಣ್ಣ, ರವಿ ಬೋಸರಾಜ್, ಬಸವರಾಜ್ ಕೌತಾಳ್, ಹನುಮೇಶ ಗುಂಡೂರ್, ಮಾದಿಗ ನೌಕರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್, ಶಂಕರಪ್ಪ, ಗುಡಿಮನಿ, ಚೌಡಿ ಲೋಕೇಶ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.