
ನವದೆಹಲಿ: ಉದ್ದೇಶಿತ ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ನೆರವಿನಿಂದ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ.
ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಲಬುರ್ಗಿ ಸಂಸದ ರಾಧಾಕೃಷ್ಣ ಕೇಳಿದ ಪ್ರಶ್ನೆಗೆ ಗ್ರಾಹಕ ವ್ಯವಹಾರ ಖಾತೆ ರಾಜ್ಯ ಸಚಿವೆ ನಿಮುಬೆನ್ ಜಯಂತಿಬಾಯಿ ಬಂಬಾನಿಯಾ ಈ ಬಗ್ಗೆ ಉತ್ತರ ನೀಡಿದ್ದಾರೆ.
ಪಡಿತರ ಚೀಟಿಗಳ ಡಿಜಿಟಲೀಕರಣ, ಆಧಾರ್ ಜೋಡಣೆ, ಅನರ್ಹ ದಾಖಲೆಗಳು, ಸಾವು, ಫಲಾನುಭವಿಗಳ ಶಾಶ್ವತ ವಲಸೆ ಮತ್ತಿತರ ಕಾರಣಗಳಿಂದ ದೇಶದಲ್ಲಿ ಈ ಅವಧಿಯಲ್ಲಿ 2.25 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.
ಇದಲ್ಲದೇ, ಇಲಾಖೆಯು 2024–25ನೇ ಸಾಲಿನಲ್ಲಿ ಸಮಗ್ರ ದತ್ತಾಂಶ ವಿಶ್ಲೇಷಣೆ ಮೂಲಕ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಸಿದೆ. ಇದರಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ ಫಲಾನುಭವಿಗಳು, ಚಾಲ್ತಿಯಲ್ಲಿಲ್ಲದ ಪಡಿತರ ಚೀಟಿಗಳು, ನಕಲಿ ಪಡಿತರ ಚೀಟಿಗಳು ಮತ್ತು ಏಕ-ಸದಸ್ಯ ಪಡಿತರ ಚೀಟಿಗಳನ್ನು ಹೊಂದಿರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಫಲಾನುಭವಿಗಳ ದತ್ತಾಂಶಗಳನ್ನು ವಿವಿಧ ಇಲಾಖೆಗಳ ಜತೆಗೆ ಹಂಚಿಕೊಳ್ಳಲಾಯಿತು. ಈ ಪ್ರಕ್ರಿಯೆಯಲ್ಲಿ 8.51 ಕೋಟಿ ಫಲಾನುಭವಿಗಳನ್ನು ಗುರುತಿಸಿ ಕ್ಷೇತ್ರ ಪರಿಶೀಲನೆ ನಡೆಸಿ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಇಲ್ಲಿಯವರೆಗೆ, ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 2.12 ಕೋಟಿ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.