ADVERTISEMENT

ಕರ್ನಾಟಕ ಖಾದಿ ಬ್ರ್ಯಾಂಡ್‌ಗೆ ಉತ್ತೇಜನ

ಅತ್ಯಾಧುನಿಕ ಯಂತ್ರ ಬಳಕೆ, ಕಸುಬುದಾರರಿಗೆ ತರಬೇತಿ, ವಹಿವಾಟು ವೃದ್ದಿಗೆ ಯೋಜನೆ

ಉಮೇಶ ಭಟ್ಟ ಪಿ.ಎಚ್.
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
ಖಾದಿ ಉತ್ಪನ್ನಗಳ ಪ್ರಯೋಗಕ್ಕೆ ಮುಂದಾದ ಖಾದಿ ಮಂಡಳಿ
ಖಾದಿ ಉತ್ಪನ್ನಗಳ ಪ್ರಯೋಗಕ್ಕೆ ಮುಂದಾದ ಖಾದಿ ಮಂಡಳಿ   

ಬೆಂಗಳೂರು: ಕರ್ನಾಟಕ ಖಾದಿಯೆಂದರೆ ಇನ್ನು ಮುಂದೆ ಬರೀ ಸೀರೆ, ಪಂಚೆಗಳಷ್ಟೇ ಇರುವುದಿಲ್ಲ. ಬದಲಿಗೆ ಯುವಜನರು, ಮಹಿಳೆಯರು, ಮಕ್ಕಳೂ ಇಷ್ಟ ಪಡುವ ಟ್ರೆಂಡಿ ಉಡುಪುಗಳೂ ಜನರನ್ನು ಆಕರ್ಷಿಸಲಿವೆ. ಇವುಗಳನ್ನು ಖಾದಿಗೆ ಆಧುನಿಕ ಸ್ಪರ್ಶ ನೀಡಿ ಮಾರುಕಟ್ಟೆಗೆ ಪರಿಚಯಿಸಿ ವಹಿವಾಟು ವಿಸ್ತರಿಸಲು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಂದಾಗಿದೆ.

ಗಾಂಧೀಜಿಯಿಂದ ಪ್ರೇರಿತವಾಗಿ ಏಳು ದಶಕದಿಂದಲೂ ಖಾದಿ ಮಂಡಳಿ ಕಸುಬುದಾರರು, ದೇಸಿ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಆದರೂ ಖಾದಿ ಎನ್ನುವುದು ರಾಜಕೀಯ ನೇತಾರರು ಹಾಗೂ ಆಸಕ್ತರ ಉಡುಪು ಎನ್ನುವಂತಾಗಿದೆ. ಇದನ್ನು ಬದಲಾಯಿಸಿ ಎಲ್ಲ ವಯಸ್ಸಿನವರೂ ಹೆಚ್ಚೆಚ್ಚು ಬಳಸುವಂತೆ ಮಾಡುವ ಪ್ರಯತ್ನಗಳು ನಡೆದಿವೆ.

ಖಾದಿ ಉಡುಪುಗಳು ನೈಸರ್ಗಿಕ ಬಣ್ಣದಿಂದ ತಯಾರಿಸುವಂತವು. ಪರಿಸರ ಸುಸ್ಥಿರತೆ ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಖಾದಿ ಬಳಕೆ ಎಲ್ಲಾ ಕಾಲಕ್ಕೂ ಉತ್ತಮ ಎನ್ನುವ ಅಂಶಕ್ಕೆ ಒತ್ತು ನೀಡಿ ಉತ್ತೇಜಿಸಲಾಗುತ್ತಿದೆ.  

ADVERTISEMENT

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಸೂಚನೆ ಮೇರೆಗೆ ಭಾರತ ಸರ್ಕಾರದ ‘ಖಾದಿ ಇಂಡಿಯಾ’ ಮಾದರಿಯಲ್ಲಿಯೇ ವಿಧಾನಸೌಧದ ಆವರಣದಲ್ಲಿಯೇ ಕರ್ನಾಟಕ ಖಾದಿ ಪ್ರದರ್ಶನ ಆಯೋಜಿಸುವ ತಯಾರಿಯೂ ನಡೆಯುತ್ತಿದೆ.‌

ಖಾದಿ ಉತ್ಪಾದನೆಗೆ ಚರಕ ಹಾಗೂ ಕೈಮಗ್ಗವನ್ನು ಕಸುಬುದಾರರು ಬಳಸುತ್ತಿದ್ದರೂ ಗುಜರಾತ್, ಪಶ್ಚಿಮ ಬಂಗಾಲ ಸಹಿತ ಹಲವು ರಾಜ್ಯಗಳಲ್ಲಿ ಆಧುನಿಕ ಯಂತ್ರ ಬಳಕೆಯಿದೆ. ಕರ್ನಾಟಕದಲ್ಲೂ ಇದನ್ನು ಹಂತ ಹಂತವಾಗಿ ಹೆಚ್ಚಿಸಲು ಮಂಡಳಿ ಯೋಜಿಸುತ್ತಿದೆ.

ಯಂತ್ರಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ವರದಿ ನೀಡುವಂತೆ ಮೂರು ಎಂಜಿನಿಯರಿಂಗ್ ಕಾಲೇಜುಗಳ ಜತೆಯಲ್ಲಿ ಒಪ್ಪಂದವೂ ಆಗಿದೆ. ಬೆಂಗಳೂರಿನ ಸಿಲ್ವರ್‌ ಜುಬಿಲಿ ಚಾಮರಾಜೇಂದ್ರ ತಂತ್ರಜ್ಞಾನ ಕಾಲೇಜು, ದಾವಣಗೆರೆಗೆ ಬಾಪೂಜಿ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಗದಗ ಜಿಲ್ಲೆ ಹುಲಕೋಟಿ ಪಾಟೀಲ ತಂತ್ರಜ್ಞಾನ ಸಂಸ್ಥೆಗಳು ಯಂತ್ರಗಳ ಆಧುನೀಕರಣಕ್ಕೆ ಪೂರಕವಾಗಿ ಕೆಲಸ ಮಾಡಲಿವೆ.

ಜವಳಿ ಕ್ಷೇತ್ರದಲ್ಲಿನ ಬದಲಾವಣೆಗಳು, ಜವಳಿ ಉತ್ನನ್ನಗಳ ಮೌಲ್ಯವರ್ಧನೆಗೆ ಪೂರಕವಾದ ಮಾರುಕಟ್ಟೆ ಆಧರಿತ ಮಾಹಿತಿಯನ್ನೂ ವರದಿಯಲ್ಲಿ ನೀಡಲಿವೆ. ತರಕಾರಿ, ಹಣ್ಣುಗಳಿಂದ ಸಾವಯವ ಬಣ್ಣಗಳನ್ನು ತೆಗೆಯುವ ತರಬೇತಿ ಯೋಜನೆ ರೂಪಿಸಲಿವೆ.

ಖಾದಿ ಉತ್ಪಾದನೆ ಮಾಡುವವರು ಹಾಗೂ ಮಂಡಳಿ ನೌಕರರಿಗೂ ಆಧುನಿಕ ಮಾರ್ಗಗಳ ತರಬೇತಿ ನೀಡಲು ಮುಂದಿನ ವಾರ ಗುಜರಾತ್‌ಗೆ ಕಳುಹಿಸಲಾಗುತ್ತಿದೆ. ಅಕ್ಟೋಬರ್ ಮೊದಲ ವಾರ 50 ಮಂದಿ ಮೊದಲ ತಂಡ ತೆರಳಿ ನೂಲು ತೆಗೆಯುವಿಕೆಯ ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆ, ಮೌಲ್ಯವರ್ಧನ ಕ್ರಮಗಳ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಖಾದಿಯಿಂದ ಸದ್ಯ ಸೀರೆ, ಲುಂಗಿ, ಅಂಗಿ, ಕರವಸ್ತ್ರ ಸಹಿತ ಹಲವು ಉತ್ಪನ್ನಗಳು ಬಳಕೆಯಲ್ಲಿವೆ. ಇವು ಎಲ್ಲರನ್ನೂ ತಲುಪುತ್ತಿಲ್ಲ. ಇದನ್ನು ಗುರಿಯಾಗಿಟ್ಟುಕೊಂಡೇ ಬೆಂಗಳೂರಿನ ಎರಡು ಮೂರು ಜವಳಿ ಉದ್ಯಮ ಸಂಸ್ಥೆಗಳಿಗೆ ಖಾದಿ ಬಳಸಿ ಹೊಸ ಮಾದರಿ ಉಡುಪು ಸಿದ್ದಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಈ ನಿಟ್ಟಿನಲ್ಲೂ ಕೆಲಸಗಳು ನಡದಿವೆ.

‘ಎರಡು ವರ್ಷದಿಂದ ಜವಳಿ ವಲಯದಲ್ಲಿದ್ದೇನೆ. ಕರ್ನಾಟಕ ಖಾದಿ ಬಳಸಿ ವಿವಿಧ ಉತ್ಪನ್ನಗಳನ್ನು ಸಿದ್ದಪಡಿಸಿ ಜಾಗತಿಕವಾಗಿ ಮಾರುಕಟ್ಟೆ ಬಲಪಡಿಸುವ ಉದ್ದೇಶದಿಂದ ಮಂಡಳಿ ಸಹಯೋಗದೊಂದಿಗೆ ಚಟುವಟಿಕೆ ನಡೆದಿದೆ. ಖಾದಿ ಬಳಕೆ ಉತ್ತೇಜನ, ಕುಶಲಕರ್ಮಿಗಳಿಗೂ ಹೆಚ್ಚಿನ ಬೇಡಿಕೆ ಸಿಗಲಿ ಎನ್ನುವ ಉದ್ದೇಶವೂ ಇದರ ಹಿಂದೆ ಇದೆ’ ಎಂದು ಬೆಂಗಳೂರಿನ ವಸ್ತ್ರ ವಿನ್ಯಾಸಕಿ ರಜನಿ ರೇಖಾ ತಿಳಿಸಿದರು.

ಖಾದಿ ಉತ್ಪನ್ನಗಳ ಪ್ರಯೋಗಕ್ಕೆ ಮುಂದಾದ ಖಾದಿ ಮಂಡಳಿ

ಖಾದಿ ಬಳಕೆ ಹೇಗಿದೆ

  • 14,000 ಕರ್ನಾಟಕದ  ಕಸುಬುದಾರರು

  • ₹ 250 ಕೋಟಿ ವಹಿವಾಟು

  • 175 ಖಾದಿ ಗ್ರಾಮೋದ್ಯೋಗ ಸಂಸ್ಥೆಗಳು

ಖಾದಿ ನೀತಿ ವಹಿವಾಟು ಹೆಚ್ಚಳ

‘ಕರ್ನಾಟಕ ಖಾದಿ ನೀತಿಯನ್ನು ರೂಪಿಸಿ ವಿದ್ಯಾರ್ಥಿಗಳು ಸರ್ಕಾರಿ ನೌಕರರು ಒಂದು ದಿನವಾದರೂ ಖಾದಿ ಉಡುಪು ಬಳಸುವಂತೆ ಮಾಡುವುದು. ಹೊಸ ಮಾದರಿಯ ಉಡುಪುಗಳಿಂದ ವಹಿವಾಟನ್ನು ಕನಿಷ್ಠ ₹ 1000 ಕೋಟಿಗಾದರೂ ವಿಸ್ತರಿಸಿ ಹಂತ ಹಂತವಾಗಿ ₹3000 ಕೋಟಿಗೆ ತಲುಪುವುದು. ಅದರ ಲಾಭ ಕಸುಬುದಾರರಿಗೆ ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ’ಎಂದು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ಎಲ್ಲಾ ವಯೋಮಾನದವರು ಖಾದಿ ಉಡುಪುಗಳನ್ನು ಬಳಸಲು ಕರ್ನಾಟಕ ಖಾದಿ ಬ್ರಾಂಡ್‌ ಅಡಿ ಹೆಚ್ಚು ಮಾರುಕಟ್ಟೆ ಪರಿಚಯಿಸುತ್ತಲೇ ಉತ್ಪಾದಕರಿಗೂ ಆಧುನಿಕ ತರಬೇತಿ ನೀಡಲು ಮಂಡಳಿ ಕಾಯೋನ್ಮುಖವಾಗಿದೆ
ಡಿ.ಬಿ.ನಟೇಶ ಕಾರ್ಯನಿರ್ವಾಹಕ ಅಧಿಕಾರಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಖಾದಿ ಮಂಡಳಿ ಸಿಇಒ ಡಿ.ಬಿ.ನಟೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.