ADVERTISEMENT

ಅಧಿಕಾರ ಹಸ್ತಾಂತರದ ಚರ್ಚೆ: ಬಜೆಟ್‌ ತಯಾರಿಯಲ್ಲಿ CM, 'ಸಮಯ'ದ ನಿರೀಕ್ಷೆಯಲ್ಲಿ DCM

ಶುರುವಾಯ್ತು ಮಾತಿನ ಸಮರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 19:30 IST
Last Updated 7 ಫೆಬ್ರುವರಿ 2026, 19:30 IST
<div class="paragraphs"><p>ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್</p></div>

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್

   
ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬಜೆಟ್‌ ತಯಾರಿಯಲ್ಲಿ ಸಿದ್ದರಾಮಯ್ಯ ತೊಡಗಿಕೊಂಡಿದ್ದರೆ, ‘ಮುಂದಿನದನ್ನು ಕಾಲವೇ ಹೇಳುತ್ತದೆ’ ಎಂಬ ನಂಬಿಕೆಯ ಮಾತುಗಳನ್ನು ಶಿವಕುಮಾರ್ ಪುನರುಚ್ಚರಿಸುತ್ತಿದ್ದಾರೆ. ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರ ಮಾತುಗಳು ಪಕ್ಷದಲ್ಲಿ ಅಂತರ್‌ಕಲಹದ ಕಿಡಿ ಹೊತ್ತಿಸಿವೆ. ನಾಯಕರ ಆಪ್ತರು ದಿನಕ್ಕೊಂದು ಹೇಳಿಕೆಯ ಬಾಣ ಬಿಡತೊಡಗಿದ್ದಾರೆ.
‘ಹೈಕಮಾಂಡ್ ಹೈಕಮಾಂಡೇ. ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಹೈಕಮಾಂಡ್ ಏನೂ ಹೇಳದೇ ಇರುವುದರಿಂದ ಮುಖ್ಯಮಂತ್ರಿ ಬದಲಾವಣೆ ಆಗಲ್ಲ ಎಂದರ್ಥ, ಅವರೇ ಮುಂದುವರಿಯಲಿದ್ದಾರೆ.
– ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ
'ಸಿದ್ದರಾಮಯ್ಯಗಿಂತ ಯತೀಂದ್ರ ಮೇಲೆ'

‘ಯತೀಂದ್ರ ಅವರು ಸಿದ್ದರಾಮಯ್ಯ ಅವರಿಗಿಂತ ಮೇಲೆ ಕುಳಿತಿದ್ದಾರೆ. ಅದಕ್ಕೇ ಅವರನ್ನು ನಮ್ಮ ಹೈಕಮಾಂಡ್ ಎಂದು ಹೇಳಿದ್ದೇನೆ...’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ರಾಯಚೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಹೈಕಮಾಂಡ್ ಅಂತಿದ್ದಾರೆ. ಇವರು (ಯತೀಂದ್ರ) ಅವರಿಗಿಂತ ಮೇಲೆ ಹೇಳ್ತಿದ್ದಾರೆ. ಮುಂದಿನದನ್ನು ಕಾಲವೇ ಹೇಳುತ್ತದೆ' ಎಂದರು.

ಬೆಳಿಗ್ಗೆ ಮಂಗಳೂರಿನಲ್ಲಿ ಮಾತನಾಡಿದ್ದ ಶಿವಕುಮಾರ್‌, ‘ನಾನು ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಬೇಕು’ ಎಂದರು.

ADVERTISEMENT

ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂಬ ಪ್ರಶ್ನೆಗೆ, ‘ಸಮಯವೇ ಉತ್ತರ ನೀಡಲಿದೆ’ ಎಂದರು.

ಡಿಕೆಶಿ ಕೇಳಿದರೆ ಪ್ರಾಣ ಕೊಡುತ್ತೇವೆ: ಶಿವಗಂಗಾ

ದಾವಣಗೆರೆ: ‘ಶಿವಕುಮಾರ್‌ ಅವರಿಗೆ ಪಕ್ಷದ ಎಲ್ಲ ಶಾಸಕರ ಬೆಂಬಲ ಇದೆ. ಅವರು ಏನೇ ಹೇಳಿದರೂ ಮಾಡಲು ನಾನೂ ಸೇರಿದಂತೆ 40ರಿಂದ 50 ಯುವ ಶಾಸಕರು ಸಿದ್ಧರಿದ್ದೇವೆ. ಪ್ರಾಣ ಕೇಳಿದರೂ ಕೊಡುತ್ತೇವೆ’ ಎಂದು ಚನ್ನಗಿರಿಯ ಕಾಂಗ್ರೆಸ್‌ ಶಾಸಕ ಶಿವಗಂಗಾ ಬಸವರಾಜು ಹೇಳಿದರು.

‘ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರಿಸುವುದಕ್ಕೆ ಸಂಬಂಧಿಸಿ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡ್ ಅಥವಾ ಸಿದ್ದರಾಮಯ್ಯಸ್ಪಷ್ಟಪಡಿಸಬೇಕು. ಹಾಗಾದಾಗ ಯಾರೂ ಆ ಬಗ್ಗೆ ಮಾತನಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಧಿಕಾರ ಹಸ್ತಾಂತರದ ವಿಷಯದಲ್ಲಿ ನನ್ನ ಒಂದು ಸಹಮತ ಇದೆ. ನಮ್ಮ ಹೈಕಮಾಂಡ್‌ ದೆಹಲಿಯಲ್ಲಿದೆ. ಯತೀಂದ್ರ ಅವರು ತಮ್ಮ ಹೈಕಮಾಂಡ್ ಯಾರು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಆಗ್ರಹಿಸಿದರು. 

‘ಯತೀಂದ್ರ ಸಿದ್ದರಾಮಯ್ಯ ಪಕ್ಷಕ್ಕೆ ಧಕ್ಕೆ ತರುವ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಮುಖ್ಯಮಂತ್ರಿಯ ಪುತ್ರ ಎಂಬ ಕಾರಣಕ್ಕೆ ಏನೇನೋ ಹೇಳಬಾರದು. ಹೈಕಮಾಂಡ್ ಸುಮ್ಮನೆ ಕುಳಿತಿಲ್ಲ, ಎಲ್ಲವನ್ನೂ ಗಮನಿಸುತ್ತಿದೆ. ನಾನಂತೂ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಉಪವಾಸ ವ್ರತವನ್ನೂ ಮಾಡುತ್ತಿದ್ದೇನೆ’ ಎಂದರು.

ನಾಯಕತ್ವ ಬದಲಾವಣೆ ಕುರಿತಂತೆ ಆಗಾಗ ಕೇಳಿ ಬರುತ್ತಿರುವ ವದಂತಿ ಕೇವಲ ಊಹಾಪೋಹ. ಅವೆಲ್ಲ ಅವರವರ ವೈಯಕ್ತಿಕ ಹೇಳಿಕೆಗಳು. ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ.
– ಸಲೀಂ ಅಹಮದ್, ಸರ್ಕಾರಿ ಮುಖ್ಯ ಸಚೇತಕ, ವಿಧಾನ ಪರಿಷತ್ತು
‘ಹೈಕಮಾಂಡ್ ಮೌನವೇ ಸೂಚನೆ’

ಮೈಸೂರು: ‘ಪಕ್ಷದೊಳಗೆ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಪ್ರಸ್ತಾವವೇ ನಡೆದಿಲ್ಲ. ಹೈಕಮಾಂಡ್ ಸುಮ್ಮನಿದೆ ಎಂದರೆ ಅದರಲ್ಲಿ ಬದಲಾವಣೆಗಳಿಲ್ಲ ಎಂದರ್ಥ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಗೊಂದಲ ಇದ್ದಿದ್ದರೆ ಶಾಸಕರು ಸಿಎಲ್‌ಪಿ ಸಭೆಯಲ್ಲಿ ಹೇಳುತ್ತಿದ್ದರು. ಯಾರೊಬ್ಬರೂ ಈ ಬಗ್ಗೆ ಮಾತನಾಡಿಲ್ಲ. ಯತೀಂದ್ರ ಅವರ ಹೇಳಿಕೆ ವೈಯಕ್ತಿಕ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಿಸಿತ್ತು. ನಂತರ ಅವರ ಬದಲಾವಣೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ವರಿಷ್ಠರು ಅಗತ್ಯ ಇದ್ದಾಗ ಮಾತನಾಡುತ್ತಾರೆ. ಅವರ ತೀರ್ಮಾನವೇ ಅಂತಿಮ’ ಎಂದು ಹೇಳಿದರು.

ಯತೀಂದ್ರ ನೀಡುತ್ತಿರುವ ಹೇಳಿಕೆಗಳು ಅವರ ವಂಶಪಾರಂಪರ್ಯ ಅಧಿಕಾರದ ಪ್ರತೀಕ. ಮುಂದೆ ಕಾಂಗ್ರೆಸ್‌ನವರು  ರಸ್ತೆಗಳಲ್ಲಿ ಹೊಡೆದಾಡುವ ಸ್ಥಿತಿ ಬರುತ್ತದೆ. ಇದು ಅದರ ಮುನ್ಸೂಚನೆ.
– ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಡಿಕೆಶಿ ನಿಲುವಿಗೆ ಸೇಠ್‌ ಸಹಮತ

ಮೈಸೂರು: ‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ’ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅವರ ನಿಲುವೇ ನನ್ನ ನಿಲುವು’ ಎಂದು ಕಾಂಗ್ರೆಸ್ ಶಾಸಕ ತನ್ವೀರ್‌ ಸೇಠ್‌ ಹೇಳಿದರು.

‘ಅಧಿಕಾರ ಯಾರಿಗೂ ಶಾಶ್ವತವಲ್ಲ. ವರಿಷ್ಠರ ತೀರ್ಮಾನ ಬರುವವರೆಗೂ ನಾವು ಮಾತನಾಡುವುದು ಸರಿಯಲ್ಲ. ಜನವರಿಯಲ್ಲಿ ಸಂಪುಟ ವಿಸ್ತರಣೆ ಎಂದು ಹೇಳಿದ್ದರು. ಆದರೆ, ಯಾವ ಜನವರಿ ಎಂದು ಹೇಳಿಲ್ಲ’ ಎಂದರು.

ಇಲಾಖೆಗಳಲ್ಲಿ ಯತೀಂದ್ರ ಅವರ ಹಸ್ತಕ್ಷೇಪ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಕೆಲವು ಅಧಿಕಾರಿಗಳು ಶಂಖದಿಂದ ಬಂದರೆ ಮಾತ್ರ ತೀರ್ಥ ಎಂದುಕೊಂಡಿದ್ದಾರೆ. ನಾವು ಕೂಡ ಶಂಖ ಊದುವ ಕೆಲಸ ಮಾಡಲಿದ್ದೇವೆ. ಸೂಕ್ತ ಸನ್ನಿವೇಶ ಬಂದಾಗ ಎಲ್ಲವೂ ಬಹಿರಂಗವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.