ADVERTISEMENT

Leadership Row | ಉಪಾಹಾರ ಕೂಟ: ಡಿಕೆಶಿ ಮನೆಗೆ ಬಂದ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 5:18 IST
Last Updated 2 ಡಿಸೆಂಬರ್ 2025, 5:18 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಸದಾಶಿವನಗರದಲ್ಲಿರುವ ನಿವಾಸಕ್ಕೆ ತೆರಳಿದ್ದು, ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ.

ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ತಮ್ಮ ಮನೆಗೆ ಉ‍ಪಾಹಾರಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಉಪಾಹಾರಕ್ಕೂ ಮುನ್ನ ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದ್ದಾರೆ.

ADVERTISEMENT

ತಮ್ಮ ಮಧ್ಯೆ ಯಾವುದೇ ಭಿನ್ನಮತ ಇಲ್ಲ ಎಂದು ಬಿಂಬಿಸಲು ಉಪಾಹಾರ ಕೂಟ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೊಂದು ಉಪಾಹಾರ ಕೂಟದಲ್ಲಿ ಜತೆ ಸೇರಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಸರ್ಕಾರದ ‘ನಾಯಕತ್ವ’ಕ್ಕಾಗಿ ಗುದ್ದಾಟ, ‘ಕೊಟ್ಟ ಮಾತು’ ಕುರಿತ ವಾಗ್ವಾದಗಳಿಂದಾಗಿ ಕಾವೇರಿದ್ದ ರಾಜಕಾರಣವನ್ನು ಮುಖ್ಯಮಂತ್ರಿ ಅಧಿಕೃತ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದಿದ್ದ ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ಉಪಾಹಾರ ಕೂಟ ಸ್ವಲ್ಪಮಟ್ಟಿಗೆ ಶಮನ ಮಾಡಿತ್ತು. ಈಗ ಶಿವಕುಮಾರ್ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ‘ಅಧಿಕಾರ ಹಂಚಿಕೆಯ ಸೂತ್ರ’ದ ವಿಷಯ ಮುನ್ನೆಲೆಗೆ ಬಂದಿತ್ತು. ಇಬ್ಬರೂ ಸೇರಿದಂತೆ ಕೆಲ ಸಚಿವರು–ಶಾಸಕರು, ಕಾಂಗ್ರೆಸ್‌ ನಾಯಕರ ಹೇಳಿಕೆ–ಪ್ರತಿ ಹೇಳಿಕೆಗಳು ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದವು. ಸಮುದಾಯದ ಮಠಾಧೀಶರು, ಜಾತಿ ಸಂಘಗಳ ಹೇಳಿಕೆಗಳು ಬೀದಿರಂಪವಾಗಿಸಿದ್ದವು.

ಸುದೀರ್ಘ ಅವಧಿ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ಹೈಕಮಾಂಡ್‌, ದಿಢೀರ್‌ ಮಧ್ಯ ಪ್ರವೇಶಿಸಿ ‘ಉಪಾಹಾರ ಕೂಟ’ ನಡೆಸಿ ಭಿನ್ನಮತ ಶಮನ ಮಾಡಿಕೊಳ್ಳಿ ಎಂದು ಉಭಯ ನಾಯಕರಿಗೂ ಸೂಚಿಸಿತ್ತು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾತುಕತೆ

ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಡಿ.ಕೆ. ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.