ADVERTISEMENT

ವಿಬಿ–ಜಿ ರಾಮ್ ಜಿ ಕಾಯ್ದೆ: ಗ್ರಾಮೀಣ ಜನರು ಮತ್ತೆ ಗುಳೆ ಹೋಗುವ ಸ್ಥಿತಿ –ಎಚ್‌ಕೆಪಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 21:11 IST
Last Updated 4 ಫೆಬ್ರುವರಿ 2026, 21:11 IST
<div class="paragraphs"><p>ನರೇಗಾ</p></div>

ನರೇಗಾ

   

ಬೆಂಗಳೂರು: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದು, ಹಿಂದಿನ ನರೇಗಾ ಯೋಜನೆ ಮರು ಜಾರಿಗೆ ಆಗ್ರಹಿಸಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಮಂಡಿಸಿದ ನಿರ್ಣಯ ಕುರಿತು ವಿಧಾನ ಪರಿಷತ್‌ನಲ್ಲೂ ಪರ–ವಿರೋಧದ ಚರ್ಚೆ ನಡೆಯಿತು.

ನಿರ್ಣಯ ಮಂಡಿಸಿದ ಎಚ್‌.ಕೆ.ಪಾಟೀಲ ಅವರು, ‘20 ವರ್ಷಗಳಿಂದ ಜಾರಿಯಲ್ಲಿರುವ ಅತ್ಯುತ್ತಮ ಯೋಜನೆಯನ್ನು ಬದಲಾಯಿಸಿರುವುದು ಸರಿಯಲ್ಲ. ಇದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನೇ ಹಾಳು ಮಾಡುತ್ತದೆ. ಗ್ರಾಮೀಣ ಜನರು ಮತ್ತೆ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನರೇಗಾ ಯೋಜನೆಯ ಅನುಷ್ಠಾನದಲ್ಲಿ ರಾಮನಗರ ಜಿಲ್ಲೆಯ ಕಾರ್ಯ ಶ್ಲಾಘಿಸಿ ಕೇಂದ್ರ ಸರ್ಕಾರವೇ ಪ್ರಮಾಣಪತ್ರ ನೀಡಿದೆ. ಕನಕಪುರ ಒಂದರಲ್ಲೇ ₹1,200 ಕೋಟಿಯ ಕೆಲಸವಾಗಿದೆ. ಇಂತಹ ಯೋಜನೆಯನ್ನು ರಾಜಕೀಯ ಕಾರಣಗಳಿಗೆ ಬದಲಾಯಿಸುವುದು ಸರಿಯಲ್ಲ ಎಂದರು. 

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರು, ‘ಕಾಯ್ದೆಯ ಲೋಪಗಳನ್ನು ಸರಿಪಡಿಸಿ ಮರು ಜಾರಿ ಮಾಡಲಾಗಿದೆ. ಗಾಂಧಿ ಹೆಸರಷ್ಟೇ ಬದಲಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಕಾಯ್ದೆ ರೂಪಿಸಲಾಗಿದೆ. ಇದು ಗ್ರಾಮಿಣ ಜನರ ಬದುಕನ್ನು ಮತ್ತಷ್ಟು ಎತ್ತರಿಸಲಿದೆ. ರಾಜ್ಯ ಸರ್ಕಾರದ ವಿರೋಧ ಸರಿಯಲ್ಲ’ ಎಂದರು.

ಕಾಂಗ್ರೆಸ್‌ನ ಕೆ.ಶಿವಕುಮಾರ್‌, ರಮೇಶ್‌ಬಾಬು, ಉಮಾಶ್ರೀ, ನಾಗರಾಜ್‌ ಯಾದವ್‌, ಐವನ್‌ ಡಿಸೋಜ, ವಸಂತಕುಮಾರ್, ಬಿಜೆಪಿಯ ಕೆ.ಎಸ್‌.ನವೀನ್‌, ಪಿ.ಎಚ್‌.ಪೂಜಾರ್‌, ನರಸಿಂಹನಾಯಕ್‌, ಹೇಮಲತಾ ನಾಯಕ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.