ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಗ್ರೇಟರ್ ಬೆಂಗಳೂರು ಜೊತೆಗೆ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ನಾವು ತಯಾರಾಗಿದ್ದೇವೆ. ಈ ಚುನಾವಣೆಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯು ಯಾವುದೇ ಪರಿಣಾಮ ಬೀರುವುದಿಲ್ಲ. ಆ ಎರಡೂ ಪಕ್ಷದಿಂದ ಒಬ್ಬರೇ ಅಭ್ಯರ್ಥಿ ಆಗುತ್ತಾರೆ. ಕಾಂಗ್ರೆಸ್ ಪರ ಬೀಳುವ ಮತಗಳು ನಮ್ಮ ಅಭ್ಯರ್ಥಿಗೆ ಬಿದ್ದೇ ಬೀಳುತ್ತವೆ’ ಎಂದರು.
ಮಾರ್ಚ್‌ನಲ್ಲಿ ಬಜೆಟ್: ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದೇನೆ’ ಎಂದು ಮುಖ್ಯಮಂತ್ರಿ ಹೇಳಿದರು. ‘ ಹಾವೇರಿಯಲ್ಲಿ ಫೆಬ್ರುವರಿ 13ರಂದು ಸರ್ಕಾರದ ಸಾಧನೆಗಳ ಸಮಾವೇಶ ನಡೆಸಲು ಯೋಜಿಸಿದ್ದೇವೆ’ ಎಂದರು.
‘ ವಿಶೇಷ ಅಧಿವೇಶನ ನಡೆಸುವ ಬಗ್ಗೆ ಬುಧವಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು, ಅಲ್ಲಿ ಚರ್ಚಿಸುತ್ತೇವೆ’ ಎಂದು ಮಾಹಿತಿ ನೀಡಿದರು.
ಎಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಈಗ ಕ್ರಿಯಾಶೀಲ ಆಗಿದ್ದಾರೆ. ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೋ, ಇಲ್ಲವೋ ನಮಗೆ ಗೊತ್ತಿಲ್ಲ. ಅದೆಲ್ಲವನ್ನೂ ಮಾಧ್ಯಮಗಳೇ ಹೇಳಬೇಕು’ ಎಂದರು.
‘ ರಾಹುಲ್ ಗಾಂಧಿ ಅವರು ಗೂಡ್ಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದು, ಅವರನ್ನು ನಾವೆಲ್ಲ ಇಲ್ಲಿನ ವಿಮಾನನಿಲ್ದಾಣದಲ್ಲಿ ಭೇಟಿಯಾಗಿದ್ದೇವೆ. ಆದರೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದರು.
ಈಗಲೂ ಗೊಂದಲವಿಲ್ಲ: ‘ ರಾಜ್ಯ ಸರ್ಕಾರದಲ್ಲಿ ಈಗಲೂ ಯಾವುದೇ ಗೊಂದಲ ಇಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ಅಧಿಕಾರ ಹಸ್ತಾಂತರದ ಬಗ್ಗೆ ಏನಿದ್ದರೂ ನಾನು ಇಲ್ಲವೇ ಡಿ.ಕೆ. ಶಿವಕುಮಾರ್ ಮಾತನಾಡಬೇಕು. ನಾವು ಯಾವತ್ತೂ ಈ ಬಗ್ಗೆ ಮಾತನಾಡಿಲ್ಲ. ಶಾಸಕರು ಏನೇ ಮಾತನಾಡಬಹುದು. ಅಂತಿಮವಾಗಿ ನಾವಿಬ್ಬರೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತೇವೆ’ ಎಂದರು.
‘ ಸಂಪುಟ ಪುನರ್ ರಚನೆ ಬಗ್ಗೆ ಸದ್ಯ ಯಾವುದೇ ಚರ್ಚೆ ಇಲ್ಲ. ದೆಹಲಿಗೂ ಹೋಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.