ADVERTISEMENT

ಮಕ್ಕಳಲ್ಲೂ ಜಾತಿ ವಿಷ ಬೀಜ ಬಿತ್ತಿದ ಕಾಂಗ್ರೆಸ್‌; ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 15:23 IST
Last Updated 13 ಫೆಬ್ರುವರಿ 2023, 15:23 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ನಮ್ಮ ಸರ್ಕಾರದ ಯಾವುದೇ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜಾತಿ– ಧರ್ಮವನ್ನು ಆಧರಿಸಿಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರವು ಜಾತಿ ಮತ್ತು ಧರ್ಮದ ಆಧಾರದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜನರ ಮಧ್ಯೆ ಜಾತಿಯ ವಿಷ ಬೀಜ ಬಿತ್ತಿತು. ಇದು ತಥಾಕಥಿಕ ಜಾತಿವಾದಿಗಳ ಜಾತ್ಯತೀತತೆ’ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹರಿಹಾಯ್ದರು.

ವಿಧಾನಸಭೆಯಲ್ಲಿ ಸೋಮವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿ, ‘ನಮ್ಮ ಸರ್ಕಾರದ ಯೋಜನೆಗಳು ಬಡವರಿಗೆ, ರೈತರಿಗೆ ಬಲ ಕೊಡುವ ಯೋಜನೆಗಳಾಗಿದ್ದವು. ಜಾತಿ ಅಥವಾ ಧರ್ಮ ಕೇಂದ್ರಿತ ಯೋಜನೆಗಳಾಗಿರಲಿಲ್ಲ’ ಎಂದರು.

‘ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಾಥಮಿಕ ಶಾಲೆಯ ಹಂತದಲ್ಲೇ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡಿದರು. ಕೆಲವು ಜಾತಿಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ ಜಾರಿ ಮಾಡಿದರು. ಉಳಿದ ಜಾತಿಯ ಮಕ್ಕಳು ಯಾವ ಪಾಪ ಮಾಡಿದ್ದರು? ಅವರೂ ಬಡ ವರ್ಗದ ಮಕ್ಕಳಲ್ಲವೇ? ಅದೇ ರೀತಿ ಶಾದಿಭಾಗ್ಯ ಎಂದು ಒಂದು ಸಮುದಾಯದವರಿಗೆ ಮಾತ್ರ ಕಾರ್ಯಕ್ರಮ ಜಾರಿ ಮಾಡಿದರು. ಉಳಿದ ಸಮುದಾಯದಲ್ಲಿ ಬಡ ಹೆಣ್ಣು ಮಕ್ಕಳು ಇರಲಿಲ್ಲವೇ. ಇದು ಕಾಂಗ್ರೆಸ್‌ನವರ ಜಾತ್ಯತೀತತೆ. ಹಾಗಿದ್ದರೆ ಯಾರು ಜಾತ್ಯತೀತರು? ಯಾರು ಕೋಮುವಾದಿಗಳು’ ಎಂದು ಪ್ರಶ್ನಿಸಿದರು.

ADVERTISEMENT

‘ಯಡಿಯೂರಪ್ಪ ಅವರು ಶಾಲಾ ಹೆಣ್ಣು ಮಕ್ಕಳಿಗಾಗಿ ಜಾರಿ ಮಾಡಿದ ಬೈಸಿಕಲ್‌ ಯೋಜನೆ, ಬೊಮ್ಮಾಯಿ ಜಾರಿ ತಂದ ರೈತ ವಿದ್ಯಾನಿಧಿ ಜಾತಿ– ಧರ್ಮ ಆಧಾರಿತ ಯೋಜನೆಗಳಲ್ಲ’ ಎಂದು ರವಿ ಹೇಳಿದರು.

‘ಒಬ್ಬ ನಾಯಕರು ತಾವು ಹಿಂದು ಆದರೆ ಹಿಂದುತ್ವವಾದಿ ಅಲ್ಲ ಎನ್ನುತ್ತಾರೆ. ಹಿಂದುತ್ವ ಇಲ್ಲದೇ ಹಿಂದು ಆಗಲು ಸಾಧ್ಯವಿಲ್ಲ. ಹಿಂದುತ್ವವನ್ನು ಭಯೋತ್ಪಾದನೆಗೆ ಹೋಲಿಸುವ ಇವರು, ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸಿದವರನ್ನು ಅಮಾಯಕರು ಬಿಟ್ಟುಬಿಡಿ ಎನ್ನುತ್ತಾರೆ. ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದ ಭಯೋತ್ಪಾದಕನನ್ನು ನಮ್ಮ ಸಹೋದರ ಎನ್ನುತ್ತಾರೆ. ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಕೈಬಿಟ್ಟರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.