ADVERTISEMENT

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಜೆಡಿಎಸ್‌ನ ಮಂಜೇಗೌಡಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 15:20 IST
Last Updated 14 ಡಿಸೆಂಬರ್ 2021, 15:20 IST
ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಮಂಜೇಗೌಡಗೆ ಗೆಲುವು
ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಮಂಜೇಗೌಡಗೆ ಗೆಲುವು   

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ಗೆಲುವು ಸಾಧಿಸಿದ್ದಾರೆ.

ಮೊದಲ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಬಿಜೆಪಿಯ ರಘು 1,919 ಮತಗಳೊಂದಿಗೆ ಮುನ್ನಡೆ ಹೊಂದಿದ್ದರು. ಮಂಜೇಗೌಡ 1,780 ಮತ ಪಡೆದಿದ್ದರು. ಆದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳ ವಿಂಗಡಣೆಯಲ್ಲಿ ಉಭಯ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಯಲ್ಲಿ ಮಂಜೇಗೌಡ ಕೋಟಾ ದಾಟಿ ಮೇಲುಗೈ ಸಾಧಿಸಿದರು.

ಗೆಲುವಿಗಾಗಿ 2,186 ಮತಗಳ ಕೋಟಾ ನಿಗದಿಪಡಿಸಲಾಗಿತ್ತು. ಡಾ.ತಿಮ್ಮಯ್ಯ ಅವರು 2,865 ಮತ ಪಡೆದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದರು. ಗೆಲುವಿನ ಸುಳಿವು ಸಿಗುತ್ತಿದ್ದಂತೆ ಮತ ಎಣಿಕೆ ಕೇಂದ್ರಕ್ಕೆ ಬಂದ ಶಾಸಕ ಸಾ.ರಾ.ಮಹೇಶ್‌, ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಚುನಾವಣೆ ಗೆಲುವಿಗಾಗಿ ಜೆಡಿಎಸ್‌ ಪಕ್ಷದ ಈ ಇಬ್ಬರನ್ನು ಬಳಸಿಕೊಂಡ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧವೂ ಹರಿಹಾಯ್ದರು.

ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.