ADVERTISEMENT

ಕೊಡಗು: ತಗ್ಗಿದ ಮಳೆಯ ಆರ್ಭಟ, ಇಳಿಯದ‌ ಪ್ರವಾಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 3:15 IST
Last Updated 8 ಆಗಸ್ಟ್ 2020, 3:15 IST
ಮಡಿಕೇರಿ - ಮಂಗಳೂರು ನಡುವೆಯ ರಾಷ್ಟ್ರೀಯ ‌ಹೆದ್ದಾರಿಯ ಜೋಡುಪಾಲದ ಬಳಿ ಬಿರುಕು ಕಾಣಿಸಿದ್ದು, ಶಾಸಕ ಕೆ.ಬೋಪಯ್ಯ ವೀಕ್ಷಿಸಿದರು
ಮಡಿಕೇರಿ - ಮಂಗಳೂರು ನಡುವೆಯ ರಾಷ್ಟ್ರೀಯ ‌ಹೆದ್ದಾರಿಯ ಜೋಡುಪಾಲದ ಬಳಿ ಬಿರುಕು ಕಾಣಿಸಿದ್ದು, ಶಾಸಕ ಕೆ.ಬೋಪಯ್ಯ ವೀಕ್ಷಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಅಬ್ಬರ ಕೊಂಚ ತಗ್ಗಿದೆ. ಪ್ರವಾಹ ಇಳಿದಿಲ್ಲ. ಕಾವೇರಿ ಹಾಗೂ‌ ಲಕ್ಷ್ಮಣತೀರ್ಥ ನದಿಗಳ ಪ್ರವಾಹದಿಂದ 52 ಪ್ರದೇಶಗಳು ಮುಳುಗಡೆ ಸ್ಥಿತಿಯಲ್ಲಿವೆ.

ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲೂ ಮಳೆ ರಭಸ ಕಡಿಮೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ ಸ್ಥಿತಿಯಲ್ಲಿದೆ. ಮಳೆ ಇಳಿಮುಖವಾದರೆ, ನೀರು ತಗ್ಗುವ ಸಾಧ್ಯತೆಯಿದೆ. ಕುಶಾಲನಗರದ ಸಾಯಿ ಹಾಗೂ ಕುವೆಂಪು ಬಡಾವಣೆಗಳೂ ಜಲಾವೃತ ಸ್ಥಿತಿಯಲ್ಲಿವೆ.

ಶೋಧ ಕಾರ್ಯ: ತಲಕಾವೇರಿ ಬ್ರಹ್ಮಗಿರಿಯಲ್ಲಿ ಬೆಟ್ಟ ‌ಕುಸಿತದಿಂದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಮಣ್ಣಿನ ಅಡಿ ಸಿಲುಕಿರುವ ಶಂಕೆಯಿದ್ದು, ಶನಿವಾರ ಶೋಧ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ. ಕಳೆದ ಎರಡು ದಿನಗಳಿಂದ ಪ್ರತಿಕೂಲ ಹವಾಮಾನದಿಂದ ಶೋಧ ಕಾರ್ಯ ಸಾಧ್ಯವಾಗಿರಲಿಲ್ಲ.

ADVERTISEMENT

ಕೊಡಗು ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ 52 ಕಡೆ ಪ್ರವಾಹ ಉಂಟಾಗಿದೆ. 14 ಕಡೆ ಭೂ ಕುಸಿತ ಸಂಭವಿಸಿದೆ. 561 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. 9 ಕಡೆ ಪರಿಹಾರ ಕೇಂದ್ರ ತೆರೆಯಲಾಗಿದೆ. 566 ಮಂದಿ ಪರಿಹಾರ ಕೇಂದ್ರದಲ್ಲಿದ್ದಾರೆ. ಜಿಲ್ಲೆಯ 8 ಕಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.