ಮೈಸೂರು: ‘ಯಾರ ಬೊಕ್ಕಸ ಖಾಲಿಯಾಗಿರುವುದು? ರಾಜ್ಯ ಸರ್ಕಾರದ್ದೋ ಅಥವಾ ವಿಜಯೇಂದ್ರ ಕುಟುಂಬದ್ದೋ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಇಲ್ಲಿ ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಹಗಲು ದರೋಡೆ ನಡೆದಿದೆ ಎಂಬ ವಿಜಯೇಂದ್ರ ಆರೋಪಕ್ಕೆ, ‘ಯಾರ್ರೀ ಅವನು? ಆ ಹುಡುಗನಿಗೆ ಏನು ಗೊತ್ತು? ಹಣ ಲಪಟಾಯಿಸುವುದೊಂದೇ ಗೊತ್ತು. ಅಂಥವರನ್ನು ನಾಯಕರನ್ನಾಗಿ ಬಿಂಬಿಸಲು ಬಿಜೆಪಿಯಲ್ಲಿ ಪ್ರಯತ್ನ ನಡೆಸಿದ್ದಾರೆ’ ಎಂದು ಲೇವಡಿ ಮಾಡಿದರು.
‘ನೆರೆ ನಿರ್ವಹಣೆಗೆ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ನಾನು 14 ತಿಂಗಳು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ರಾಜ್ಯ ಸರ್ಕಾರದ ಬೊಕ್ಕಸ ಸಂಪದ್ಭರಿತವಾಗಿದೆ. ಕೇಂದ್ರ ಸರ್ಕಾರದ ಮುಲಾಜಿಗೆ ಒಳಗಾಗದೆಯೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬಹುದು’ ಎಂದರು.
‘ಎರಡು ಬಜೆಟ್‌ಗಳಲ್ಲಿ ಸಾಲಮನ್ನಾಕ್ಕಾಗಿ ₹ 25 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೆ. ಅದರಲ್ಲಿ ಇನ್ನೂ ಐದಾರು ಸಾವಿರ ಕೋಟಿ ಮಿಕ್ಕಿದೆ. ಅದನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಬಹುದು’ ಎಂದು ಹೇಳಿದರು.
ಇದನ್ನೂ ಓದಿ...ಪ್ರವಾಹ ನಷ್ಟದ ಅಂದಾಜು: ರಾಜ್ಯದ ವರದಿ ತಿರಸ್ಕರಿಸಿದ ಕೇಂದ್ರ
‘ಮುಖ್ಯಮಂತ್ರಿ ಕನಿಷ್ಠ ಸರ್ವಪಕ್ಷ ಸಭೆಯನ್ನಾದರೂ ಕರೆಯಬೇಕಿತ್ತು. ಆದರೆ, ಮಂತ್ರಿಗಳು, ಸಂಸದರು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತುತ್ತೇನೆ’ ಎಂದು ಎಚ್ಚರಿಸಿದರು.
ಕೊಡಗು ಜಿಲ್ಲೆಯಲ್ಲಿ ನೆರೆ ಬಂದಾಗ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದರು. ಆದರೆ, ಪ್ರಧಾನಿ ಭೇಟಿಯಾಗಲು ಈಗ ಅವರದ್ದೇ ಪಕ್ಷದ ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ. ಮೋದಿ ಹಾಗೂ ಯಡಿಯೂರಪ್ಪ ನಡುವೆ ಸಾಮರಸ್ಯ ಇಲ್ಲ’ ಎಂದು ನುಡಿದರು.
ಹಣಕಾಸಿನ ವ್ಯವಸ್ಥೆ ಸರಿ ಇಲ್ಲ: ವಿಜಯೇಂದ್ರ
ಮೈಸೂರು: ‘ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿಯಾದ ಮೇಲೆ ಹಣಕಾಸಿನ ವ್ಯವಸ್ಥೆ ಸರಿ ಇಲ್ಲ ಎಂಬುದು ಸತ್ಯ’ ಎಂದು ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಶುಕ್ರವಾರ ವರುಣಾದಲ್ಲಿ ತಿಳಿಸಿದರು.
‘ಕಳೆದ ಆರೂವರೆ ವರ್ಷ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರ ಹಗಲು ದರೋಡೆ ಮಾಡಿವೆ’ ಎಂದು ಆರೋಪಿಸಿದರು.
‘ಜನಪರ ಯೋಜನೆ ಜಾರಿಗೆ ತರಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ. ಬೊಕ್ಕಸ ಖಾಲಿಯಾಗಿರುವುದರಿಂದ ಅವರ ಕೈಕಟ್ಟಿ ಹಾಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.