ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡ ರೈತರಿಗೆ ಮೀಸಲಿಟ್ಟಿದ್ದ ಜಮೀನನ್ನು ಬಿಜೆಪಿ ನಾಯಕ ಆರ್. ಅಶೋಕ ಅವರು ಬಗರ್‌ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೇಯರ್, ಮಾಜಿ ಮೇಯರ್ ಹಾಗೂ ಮಾಜಿ ಉಪ ಮೇಯರ್‌ಗಳಿಗೆ ಹಂಚಿಕೆ ಮಾಡಿದ್ದರು ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
‘1998ರಿಂದ 2006ರವರೆಗೆ ಅಶೋಕ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿ ಅಧ್ಯಕ್ಷರಾಗಿದ್ದರು. ಈ ವೇಳೆ ಅವರು ಕಾನೂನುಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿದ್ದಾರೆ’ ಎಂದು ಆರೋಪಿಸಿ ಎ.ಆನಂದ ಎಂಬವರು ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
‘ಜಮೀನು ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇದು ನನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ದಾಖಲಿಸಿರುವ ಪ್ರಕರಣ. ಆದ್ದರಿಂದ ರದ್ದುಪಡಿಸಬೇಕು’ ಎಂದು ಕೋರಿ ಅಶೋಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ತನಿಖೆ ಮುಂದುವರಿಸಲು ಎಸಿಬಿಗೆ ಹೈಕೋರ್ಟ್ 2018ರಲ್ಲಿ ಹಸಿರು ನಿಶಾನೆ ತೋರಿಸಿತ್ತು. ಇದನ್ನು ಪ್ರಶ್ನಿಸಿ ಅಶೋಕ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಪ್ರಮಾಣಪತ್ರ ಸಲ್ಲಿಸುವಂತೆ ಲೋಕಾಯುಕ್ತ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ವಕೀಲ ಡಿ.ಎಲ್. ಚಿದಾನಂದ ಮೂಲಕ ಗೃಹ ಇಲಾಖೆ ಪ್ರಮಾಣಪತ್ರ ಸಲ್ಲಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಹಾಗೂ ಎನ್.ಕೋಟೀಶ್ವರ್ ಸಿಂಗ್ ಅವರ ಪೀಠವು ಪ್ರಕರಣದ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿದೆ.
‘1997ರಿಂದ 2006ರ ಅವಧಿಯಲ್ಲಿ ಬಗರ್‌ಹುಕುಂ ಯೋಜನೆಯಡಿ ಪ್ರಧಾನವಾಗಿ ಬಿಜೆಪಿ ಮುಖಂಡರು ಅಥವಾ ಅವರ ಕುಟುಂಬದವರಿಗೆ ಹಂಚಿಕೆ ಮಾಡಲಾಗಿತ್ತು. ನೈಜ ಫಲಾನುಭವಿಗಳಿಗೆ ಅನ್ಯಾಯವೆಸಗಿ ರಾಜಕೀಯ ಮುಖಂಡರಿಗೆ ಜಾಗ ಮಂಜೂರು ಮಾಡಿದ್ದರು‘ ಎಂದು ಸರ್ಕಾರ ಆರೋಪಿಸಿದೆ.
‘ಸಾರ್ವಜನಿಕ ಸಂಪನ್ಮೂಲಗಳ ದುರ್ಬಳಕೆ ಮಾಡಿ ಅನರ್ಹರಿಗೆ ಬೇಕಾಬಿಟ್ಟಿಯಾಗಿ ಭೂಮಿ ಹಂಚಲಾಗಿದೆ. ಈ ಮೂಲಕ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಉಂಟು ಮಾಡಲಾಗಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಪಾರದರ್ಶಕವಾಗಿ ಸಮಗ್ರ ತನಿಖೆ ನಡೆಸಬೇಕು. ಹೀಗಾಗಿ, ಮೇಲ್ಮನವಿಯನ್ನು ವಜಾಗೊಳಿಸಬೇಕು‘ ಎಂದೂ ಕೋರಿದೆ.
‘ಸುಪ್ರೀಂ’ಗೆ ರಾಜ್ಯ ಸಲ್ಲಿಸಿದ ಪ್ರಮಾಣಪತ್ರದಲ್ಲೇನಿದೆ?
* ಅಶೋಕ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಪಕ್ಷದ ಸಹೋದ್ಯೋಗಿ
ಡಿ. ವೆಂಕಟೇಶಮೂರ್ತಿ (ಮಾಜಿ ಮೇಯರ್) ಹಾಗೂ ಅವರ ಪತ್ನಿ ಕೆ.ಪ್ರಭಾ ಅವರಿಗೆ ತಲಾ ನಾಲ್ಕು ಎಕರೆಯನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದರು
* ನಿಯಮಗಳನ್ನು ಉಲ್ಲಂಘಿಸಿ ತಗಚಗುಪ್ಪೆ ಗ್ರಾಮದ ಸರ್ವೆ ಸಂಖ್ಯೆ 60ರಲ್ಲಿ 4.20 ಎಕರೆಯನ್ನು ಸಂದೀಪ್ ಬಾಬು ಎಂಬವರಿಗೆ ಮಂಜೂರು ಮಾಡಿದ್ದರು
* ಅಗರ ಗ್ರಾಮದ ಸರ್ವೆ ಸಂಖ್ಯೆ 91ರಲ್ಲಿ ನಾಲ್ಕು ಎಕರೆ ಜಾಗವನ್ನು ಸುಗುಮಾ ಹಾಗೂ ಅವರ ಪುತ್ರ ಕಾರ್ತಿಕ್ ಎಂಬವರಿಗೆ ಹಂಚಿಕೆ ಮಾಡಿದ್ದರು. ಹಂಚಿಕೆಯ ಸಂದರ್ಭದಲ್ಲಿ ಕಾರ್ತಿಕ್‌ಗೆ ಕೇವಲ ಮೂರು ವರ್ಷ ವಯಸ್ಸಾಗಿತ್ತು
* ಬಗರ್‌ಹುಕುಂ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ. ಒಳಗೆ ಜಮೀನು ಮಂಜೂರು ಮಾಡುವಂತಿಲ್ಲ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲೇ ಅನರ್ಹರಿಗೆ ಜಮೀನು ನೀಡಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.