ADVERTISEMENT

ನಾಟಿ ಕೋಳಿ ತಿನ್ನಬೇಕಯ್ಯ, ಏನೂ ಆಗಲ್ಲ: ಅಶೋಕರನ್ನು ಕಿಚಾಯಿಸಿದ ಸಿಎಂ ಸಿದ್ದರಾಮಯ್ಯ

ಮಾತು–ಗಮ್ಮತ್ತು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 14:50 IST
Last Updated 8 ಡಿಸೆಂಬರ್ 2025, 14:50 IST
ಅಶೋಕ ಹೆಗಲಿಗೆ ಕೈಹಾಕಿ ಮಾತನಾಡಿಸಿದ ಸಿದ್ದರಾಮಯ್ಯ
ಅಶೋಕ ಹೆಗಲಿಗೆ ಕೈಹಾಕಿ ಮಾತನಾಡಿಸಿದ ಸಿದ್ದರಾಮಯ್ಯ   

ಬೆಳಗಾವಿ (ಸುವರ್ಣ ವಿಧಾನಸೌಧ): ‘ನಾಟಿ ಕೋಳಿ ತಿನ್ನಬೇಕಯ್ಯ, ಏನೂ ಆಗಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಚಾಯಿಸಿದ ಪ್ರಸಂಗ ವಿಧಾನಸಭೆಯ ಮೊಗಸಾಲೆಯಲ್ಲಿ ಸೋಮವಾರ ನಡೆಯಿತು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಕೊಠಡಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್‌. ಅಶೋಕ ಮುಖಾಮುಖಿಯಾದರು. ಅಶೋಕ ಅವರ ಹೆಗಲಮೇಲೆ ಕೈ ಹಾಕಿದ ಸಿದ್ದರಾಮಯ್ಯ, ‘ಏನ್ ಸಣ್ಣ ಆಗಿದ್ದೀಯಾ ಅಶೋಕ್‘ ಎಂದು ಕೇಳಿದರು.

ಆಗ ಅಶೋಕ, ‘ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್. ನಾನು ಎಲ್ಲವನ್ನೂ ಬಿಟ್ಟಿದ್ದೀನಿ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ’ ಎಂದರು. ಅಶೋಕ ನಕ್ಕು ಮುಂದೆ ಸಾಗಿದರು.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಇತ್ತೀಚೆಗೆ ನಡೆದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ನಾಟಿ ಕೋಳಿ ಸಾರು, ಇಡ್ಲಿ ಸವಿದಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಆರ್‌. ಅಶೋಕ ಅವರು, ‘ಹನುಮ ಜಯಂತಿ ದಿನ ನಾಟಿ ಕೋಳಿ ತಿಂದಿದ್ದಾರೆ. ಬ್ರೇಕ್‌ ಫಾಸ್ಟ್‌ ಹೆಸರಿನಲ್ಲಿ ನಾಟಿ ಕೋಳಿ ಮರ್ಡರ್‌ ಆಗಿದೆ’ ಎಂದಿದ್ದರು.

ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ?

ಅಶೋಕ ಜೊತೆಗಿದ್ದ ಬಿಜೆಪಿ ಶಾಸಕ ವಿ. ಸುನಿಲ್‌ಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಕುಲುಕಿದರು. ಈ ವೇಳೆ ಸಿದ್ದರಾಮಯ್ಯ ಅವರು, ‘ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ?’ ಎಂದು ನಗುತ್ತಲೇ ಕೇಳಿದರು. ಅದಕ್ಕೆ ಸುನಿಲ್‌ಕುಮಾರ್‌ ಮತ್ತು ಅಶೋಕ ನಕ್ಕು ಸುಮ್ಮನಾದರು.

ಇದಕ್ಕೂ ಮುನ್ನ ಸುನಿಲ್‌ಕುಮಾರ್ ಅವರು ಸಭಾಧ್ಯಕ್ಷರ ಕೊಠಡಿಯಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಉದ್ದೇಶಿಸಿ ತುಳುವಿನಲ್ಲಿ ‘ಬೆಳಗಾವಿಯ ಮುಂದಿನ ಅಧಿವೇಶನದ ವೇಳೆ ನೀವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಸ್ಥಾನಗಳಲ್ಲಿ ಇರುತ್ತೀರಾ’ ಎಂದು ಹಾಸ್ಯದ ಧಾಟಿಯಲ್ಲಿ ಪ್ರಶ್ನಿಸಿದರು.

ಅದೇ ವೇಳೆ ಕೊಠಡಿ ಒಳಗೆ ಬಂದ ಸಿದ್ದರಾಮಯ್ಯ ಅವರು, ‘ಏನಯ್ಯ ಸುನಿಲ್‌’ ಎಂದು ನಗುತ್ತಾ ಹೆಗಲ ಮೇಲೆ ಕೈ ಹಾಕಿದರು. ‘ಮುಂದಿನ ಅಧಿವೇಶನಕ್ಕೂ ನೀವೇ ಇರಬೇಕು’ ಎಂದು ಸುನಿಲ್‌ ಹೇಳಿದಾಗ, ‘ಹಾಂ’ ಎಂದು ಸಿದ್ದರಾಮಯ್ಯ ಉದ್ಗರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.