ADVERTISEMENT

ನಕಲಿ ಸರ್ಟಿಫಿಕೇಟ್ ರಾಜ, ಎಲ್ಲಿದ್ದೀಯಪ್ಪಾ ಅಶ್ವತ್ಥನಾರಾಯಣ: ಕುಮಾರಸ್ವಾಮಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 7:16 IST
Last Updated 10 ಆಗಸ್ಟ್ 2022, 7:16 IST
ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಎಚ್‌.ಡಿ.ಕುಮಾರಸ್ವಾಮಿ
ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಉನ್ನತ ಶಿಕ್ಷಣ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಎಲ್ಲಿದ್ಯಪ್ಪ ಕುಮಾರಸ್ವಾಮಿ? ಸದನದಲ್ಲೂ ಕಾಣಿಸಿಲ್ಲ, ರಾಮನಗರದಲ್ಲೂ ಕಂಡಿಲ್ಲ ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿರುವುದನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ಏಕವಚನದಲ್ಲಿ ಕಿಡಿಕಾರಿದ್ದಾರೆ.

‘ನಕಲಿ ಸರ್ಟಿಫಿಕೇಟ್‌ ರಾಜ’, ‘ನಕಲಿ ಸರ್ಟಿಫಿಕೇಟ್‌ ಶೂರʼ (ಅಶ್ವತ್ಥನಾರಾಯಣ) ನನ್ನನ್ನು ಹುಡುಕುತ್ತಿದ್ದಾರೆ. ಎಲ್ಲಿದ್ದೀಯಪ್ಪಾ ಕುಮಾರಸ್ವಾಮಿ? ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ!! ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು’ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಕರಾವಳಿ ಕೊಲೆಗಳು, ಮಳೆ - ನೆರೆ ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿರುವುದು ನಿಜ. ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ? ಉನ್ನತ ಶಿಕ್ಷಣದ ಹುಳುಕು ಹೊರ ಬಂದಾವೆಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ‘ಸರ್ಟಿಫಿಕೇಟ್‌ ಕೋರ್ಸ್‌ʼಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ; ಬಿಚ್ಚಲೇ’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ADVERTISEMENT

‘ನಾನು ವಿರೋಧ ಪಕ್ಷದ ನಾಯಕ. ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಮೂಲಕ ಜಾರಿಕೊಳ್ಳುವ ಯತ್ನವೇಕೆ? ಕಲಾಪದಲ್ಲಿ ನನ್ನ ಮೌಲಿಕ ಪಾಲ್ಗೊಳ್ಳುವಿಕೆ ಎಷ್ಟು? ನಿಮ್ಮದೆಷ್ಟು? ತುಲನೆ ಮಾಡಿಕೊಳ್ಳಿ. ಕಾಮಾಲೆ ಕಣ್ಣುಗಳ ಪೊರೆ ತೆಗೆದು ನೋಡಿ ಅಶ್ವತ್ಥನಾರಾಯಣ’ ಎಂದು ಎಚ್‌ಡಿಕೆ ಕುಟುಕಿದ್ದಾರೆ.

‘ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯತೆ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ಆಪರೇಷನ್‌ ಕಮಲದಲ್ಲೂ ಕುಶಲತೆ? ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಾ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನನ್ನ ಸರಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು ಎಲ್ಲವೂ ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಎಚ್‌ಡಿಕೆ ಸವಾಲು ಹಾಕಿದ್ದಾರೆ.

ಪಠ್ಯ ಪರಿಷ್ಕರಣೆ ಮಾಡಿದಿರಲ್ಲ. ದಾದಿಯರ ನಕಲಿ ಸರ್ಟಿಫಿಕೇಟ್‌ ಸೃಷ್ಟಿ ಹೇಗೆ? ಆಪರೇಷನ್‌ ಕಮಲ ಮಾಡುವುದು ಹೇಗೆ? ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದು ಹೇಗೆ? ಇದೆಲ್ಲವನ್ನು ಪಠ್ಯದಲ್ಲಿ ಸೇರಿಸಿದ್ದಿದ್ದರೆ ಮುಂದಿನ ಯುವಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು? ಅಲ್ಲವೇ ಆಪರೇಷನ್‌ ಅಶ್ವತ್ಥನಾರಾಯಣ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಕಾಲು ಸುಂಕದ ರಸ್ತೆ ಕುಸಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕನಿಷ್ಠ ಪಾಪಪ್ರಜ್ಞೆಯೂ ಇಲ್ಲವೇ ನಿಮಗೆ? ಆಕಾಶದಲ್ಲಿ ಹಾರಾಡುವ ನಿಮಗೆ ಕಾಲು ಸುಂಕದ ಕಷ್ಟ ಅರ್ಥವಾದೀತೆ ಅಶ್ವತ್ಥನಾರಾಯಣ? ಮಳೆ ನೆರೆಯಿಂದ ಕರ್ನಾಟಕ ಕಣ್ಣೀರ ಕಡಲಾಗಿರುವುದು ಕಾಣುತ್ತಿಲ್ಲವೇ’ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.

ನಾನು ಎರಡನೇ ಸಲ ಸಿಎಂ ಆದಾಗ 800 ಕಾಲು ಸುಂಕ ಸೇತುವೆಗಳ ನಿರ್ಮಾಣಕ್ಕೆ ಆದೇಶಿಸಿದ್ದೆ. ಅವುಗಳಲ್ಲಿ ಎಷ್ಟು ಪೂರ್ಣಗೊಳಿಸಿದ್ದೀರಿ? 3 ವರ್ಷಗಳ ನಿಮ್ಮ ಸರ್ಕಾರದಲ್ಲಿ ಇಂಥಾ ಎಷ್ಟು ಸೇತುವೆ ನಿರ್ಮಿಸಿದ್ದೀರಿ? ಒಂದು ಮುಗ್ಧ ಸಾವು ನಿಮ್ಮ ಮನ ಕಲಕಲಿಲ್ಲವಲ್ಲಾ... ನಾಚಿಕೆ ಆಗುವುದಿಲ್ಲವೇ ಉನ್ನತ ಶಿಕ್ಷಣ ಸಚಿವರೇ ಎಂದು ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಆಪರೇಷನ್‌ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮಖ್ಯಮಂತ್ರಿ ಆದಿರಿ, ಅದೂ ಹೋಗಿ ಕೊನೆಗೆ ಉನ್ನತ ಶಿಕ್ಷಣ ಮಂತ್ರಿಗಿರಿಯಷ್ಟೇ ಉಳೀತು? ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ನೀವು ‘ಠಮ ಠಮ ಠಮʼ ಸದ್ದು ಮಾಡಲಿಲ್ಲ? ಆಗ ಎಲ್ಲಿದ್ದೀಯಪ್ಪಾ ಅಶ್ವತ್ಥನಾರಾಯಣ ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ.

ಕುಮಾರಸ್ವಾಮಿ. ಜೆಡಿಎಸ್ ಕಂಪನಿ ಇರಲಿ, ನಿಮ್ಮ ಕಂಪನಿಗಳ ಬಗ್ಗೆಯೇ ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತು ಎಂಬುದನ್ನು ಮರೆಯಬೇಡಿ. ಚುನಾವಣೆ ಬರಲಿ, ಕಂಪನಿಗಳ ಕಲರವ ಮತ್ತು ‘ಠಮ ಠಮ ಠಮʼ ಸದ್ದು ಏನೆಂಬುದನ್ನು ರಾಮನಗರದಲ್ಲಿ ಕೇಳುವಂತೆ ಮಾಡುತ್ತೇನೆ ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದ್ದಾರೆ.

‘ಪಿಎಸ್‌ಐ ಅಕ್ರಮ, ಪ್ರಾಧ್ಯಾಪಕರ ಕರ್ಮಕಾಂಡ, ಕಟ್ಟಡಗಳ ಹೆಸರಿನಲ್ಲಿ ಕಮಿಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್‌ ಮಾಡುವ ಅಶ್ವತ್ಥನಾರಾಯಣ, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ? ಇದೇನಾ ಸಂಘ‌ ಕಲಿಸಿದ ಶಿಕ್ಷಣ? ಹೇಳಿ ಡೀಲ್‌ ಅಶ್ವತ್ಥನಾರಾಯಣ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.