ADVERTISEMENT

ಸಿಎಂ ವಿರುದ್ಧ ವರಿಷ್ಠರಿಗೆ ದೂರು: ಸಹಿ ಸಂಗ್ರಹಕ್ಕೆ ಬಗ್ಗುವುದಿಲ್ಲ ಎಂದ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 11:09 IST
Last Updated 3 ಏಪ್ರಿಲ್ 2021, 11:09 IST
ಕೆ.ಎಸ್.ಈಶ್ವರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ
ಕೆ.ಎಸ್.ಈಶ್ವರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ    

ಶಿವಮೊಗ್ಗ: ತಮ್ಮ ವಿರುದ್ಧ ಯಾರೇ ಸಹಿ ಸಂಗ್ರಹ ಮಾಡಿದರೂ ಬಗ್ಗುವುದಿಲ್ಲ. ರಾಜೀನಾಮೆ, ಖಾತೆ ಬದಲಾವಣೆಗೆ ಜಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ತಮ್ಮ ನಿಲುವು ಸ್ಪಷ್ಟಪಡಿಸಿದ್ದೇನೆ. ಪಕ್ಷದ ವರಿಷ್ಠರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಗೊಂದಲಕ್ಕೆ ತೆರೆ ಎಳೆಯಲು ಸೂಚಿಸಿದ್ದಾರೆ. ಈ ಕುರಿತು ಬಹಿರಂಗವಾಗಿ ಯಾರೂ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ. ಈಗ ಎಲ್ಲವೂ ಮುಗಿದುಹೋಗಿರುವ ಕಥೆ ಎಂದರು.

ADVERTISEMENT

ಪ್ರತಿ ಪಕ್ಷಗಳಿಗೆ ಸಂಘಟಿತ ಬಿಜೆಪಿ ಎದುರಿಸಲು ಯಾವುದೇ ಅಸ್ತ್ರಗಳಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ಬೇರೇನು ವಿಷಯಗಳು ಇ್ಲಲದ ಕಾರಣ ರಾಜ್ಯಪಾಲರಿಗೆ ಬರೆದ ಪತ್ರ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ನಮ್ಮ ಮಧ್ಯೆ ಇರುವುದು ಸಣ್ಣಪುಟ್ಟ ಆಡಳಿತಾತ್ಮಕ ವಿಚಾರಗಳಲ್ಲಿನ ವ್ಯತ್ಯಾಸ. ಅವರು ಏನೇ ಮಾತನಾಡಿದರೂ ಉಪ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಮರ್ಥಿಸಿಕೊಂಡರು.

ಯಡಿಯೂರಪ್ಪ ರಾಜೀನಾಮೆ ಪ್ರಶ್ನೆಯೇ ಇಲ್ಲ: ವಿಧಾನಸಭಾ ಚುನಾವಣೆಯಲ್ಲಿ ಸೋತು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಸಿದ್ದರಾಮಯ್ಯ ಮತ್ತೆ ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸದು. ತಾವು ರಾಜ್ಯಪಾಲರಿಗೆ ಬರೆದ ಪತ್ರದ ಕಾರಣಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕುಟುಕಿದರು.

ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಖರ ಹಿಂದುತ್ವವಾದಿ. ಸಾವಿರಾರು ಗೋವುಗಳನ್ನು ಸಾಕಿದ್ದಾರೆ. ಮುಖ್ಯಮಂತ್ರಿ ವಿಷಯದಲ್ಲಿ ಏಕೆ ಹೀಗೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಅವರ ಮಾತಿನಲ್ಲಿ ಸತ್ಯವೋ, ಸುಳ್ಳೋ ಗೊತ್ತಿಲ್ಲ. ಅವರಿಗೆ ಯಾವ ಭಾಷೆಯಲ್ಲಿ ಹೇಳಬೇಕೋ ಹೇಳಿದ್ದೇನೆ. ಪಕ್ಷದ ವರಿಷ್ಠರು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.