ADVERTISEMENT

ಬಿಜೆಪಿಯವರು ‘ಜೈ ಶ್ರೀರಾಮ್’ ಎಂದರೆ ಸ್ವತಃ ರಾಮನೇ ಅಸಹ್ಯಪಡುತ್ತಾನೆ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 10:33 IST
Last Updated 30 ಮಾರ್ಚ್ 2021, 10:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಬಿಜೆಪಿಯವರು ‘ಜೈ ಶ್ರೀರಾಮ್’ ಎಂದರೆ ಸ್ವತಃ ರಾಮನೇ ಅಸಹ್ಯಪಟ್ಟುಕೊಳ್ಳುತ್ತಾನೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಿಜೆಪಿಗರು ‘ಜೈ ಶ್ರೀರಾಮ್’ ಎಂದರೆ ಸ್ವತಃ ರಾಮನೇ ಅಸಹ್ಯಪಟ್ಟುಕೊಳ್ಳುತ್ತಾನೆ. ರಾಮನ ಹೆಸರಲ್ಲಿ ಬಿಜೆಪಿ ಸರ್ಕಾರ ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ. ಪ್ರಸಾದ್ ಅತ್ತಾವರ ಎನ್ನುವ ಬಿಜೆಪಿ ಮುಖಂಡನ ವಂಚನೆ ಜಾಲ ಬಯಲಾಗಿದೆ. ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ₹17 ಲಕ್ಷ ಪಡೆದು ವಂಚಿಸಿದ್ದಾನೆ. ರಾಮ ಬಿಜೆಪಿಯನ್ನು ಕ್ಷಮಿಸುವುದಿಲ್ಲ’ ಎಂದು ವ್ಯಂಗ್ಯವಾಡಿದೆ.

‘ರಾಮನೆಂದರೆ ಹಿಂದೂಗಳಿಗೆ ಧ್ಯಾನ, ಭಕ್ತಿ, ಶ್ರದ್ಧೆ. ಸಮಸ್ತ ಹಿಂದುಗಳ ಭಾವನೆ ಗೌರವಿಸಿ ಬಿಜೆಪಿ ಸರ್ಕಾರ ಇನ್ನು ಮುಂದೆ ರಾಮನ ಹೆಸರು ಹೇಳುವುದನ್ನು ನಿಲ್ಲಿಸಬೇಕು. ರಾಜಕೀಯ, ಕೊಲೆ, ಸುಲಿಗೆ, ಹಿಂಸೆ, ವಂಚನೆ ಮುಂತಾದ ಅಧರ್ಮಗಳು ತನ್ನ ಹೆಸರಲ್ಲಿ ಮಾಡುವುದನ್ನ ರಾಮ ಸಹಿಸುವುದಿಲ್ಲ, ರಾಮನ ನಿಜ ಭಕ್ತರೂ ಸಹಿಸುವುದಿಲ್ಲ’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ ಮಾಡಿದೆ.

‘ಭ್ರಷ್ಟಾಚಾರದ ಕೂಪವಾಗಿರುವ ಬಿಜೆಪಿ ಸರ್ಕಾರದಲ್ಲಿ ರಾಮನ ಹೆಸರನ್ನು ವಂಚನೆಗೆ, ಕುಕೃತ್ಯಗಳಿಗೆ ಪರವಾನಿಗೆಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರೇ, ವಂಚಕ ಪ್ರಸಾದ್ ಅತ್ತಾವರನ ಲೂಟಿಯಲ್ಲಿ ನಿಮ್ಮದೆಷ್ಟು ಪಾಲು? ವರ್ಗಾವಣೆ, ನೇಮಕಾತಿ, ಅನುದಾನ ಬಿಡುಗಡೆ, ನೆರೆ ಪರಿಹಾರ ವಿತರಣೆ ಎಲ್ಲದರಲ್ಲೂ ಬಿಜೆಪಿ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.