ADVERTISEMENT

ಜನರ ಹಣವನ್ನು ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಸುವುದು ಅಭಿವೃದ್ಧಿಯೇ? - ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2023, 7:03 IST
Last Updated 10 ಸೆಪ್ಟೆಂಬರ್ 2023, 7:03 IST
ಕಾಂಗ್ರೆಸ್‌ (ಕಡತ ಚಿತ್ರ)
ಕಾಂಗ್ರೆಸ್‌ (ಕಡತ ಚಿತ್ರ)   

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ತೇಜಸ್ವಿ ವಿರುದ್ಧ ವಾಗ್ದಾಳಿ ನಡೆಸಿದೆ.

ತೇಜಸ್ವಿ ಸೂರ್ಯ ಅವರೇ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ, ಅಭಿವೃದ್ಧಿ ಎನ್ನುವುದು ಜನ ಕೇಂದ್ರಿತವಾಗಿರಬೇಕಲ್ಲವೇ, ಬಡ ಜನರ ಬದುಕು ಹಸನಾಗುವುದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳಲಾಗದಿರುವುದೇಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ದಲಿತರ ಏಳಿಗೆ, ಅಲ್ಪಸಂಖ್ಯಾತರ ಸಮುದಾಯಗಳ ಅಭಿವೃದ್ಧಿಗೂ ಆಕ್ಷೇಪ ಮಾಡುವ ನಿಮ್ಮ ಉದ್ದೇಶವಾದರೂ ಏನು. ಹಾಲಿನ ದರ ಏರಿಕೆಯ ಲಾಭ ರೈತರ ಕೈ ಸೇರುವುದು ನಿಮಗೆ ಇಷ್ಟವಿಲ್ಲವೇ ಎಂದು ಕೇಳಿದೆ.

ADVERTISEMENT

ನಮ್ಮ ಸರ್ಕಾರ (ಕಾಂಗ್ರೆಸ್‌) ದೇವಾಲಯಗಳ ಅರ್ಚಕರ ತಸ್ತಿಕ್‌ ಹಣವನ್ನು ಏರಿಸಿದೆ. ಇದಕ್ಕೂ ನಿಮ್ಮ ಆಕ್ಷೇಪ ಇದೆಯೇ ಎಂದು ಕೇಳಿರುವ ಕಾಂಗ್ರೆಸ್‌, ವಿದ್ಯುತ್‌ ದರ ಏರಿಸಿದ್ದು ಹಿಂದಿನ ಬಿಜೆಪಿ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ, ಗ್ಯಾಸ್‌ ಬೆಲೆ, ಪೆಟ್ರೋಲ್‌, ಡೀಸೇಲ್‌ ಬೆಲೆ ಏರಿಕೆಯ ಬಗ್ಗೆ ಮಾತಾಡುವುದಿಲ್ಲವೇಕೆ, ದುಬಾರಿ ಜಿಎಸ್‌ಟಿ ಬಗ್ಗೆ ತುಟಿ ಬಿಚ್ಚುವುದಿಲ್ಲವೇಕೆ ಎಂದು ವಾಗ್ದಾಳಿ ನಡೆಸಿದೆ.

ಜನರ ಹಣವನ್ನು ಜನರಿಗೆ ಕೊಡುವ ಬಗ್ಗೆ ಇಷ್ಟೊಂದು ಅಸಹನೆ ತೋರುವ ನಿಮ್ಮ (ಬಿಜೆಪಿಗರು) ಪ್ರಕಾರ, ಜನರ ಹಣವನ್ನು ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಸುವುದು ಅಭಿವೃದ್ಧಿಯೇ ಎಂದು ಕಾಂಗ್ರೆಸ್‌ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.