ADVERTISEMENT

ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದ ಬಿಎಸ್‌ವೈ ಕೈಲಾಗದ ಸಿಎಂ: ಕಾಂಗ್ರೆಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 9:21 IST
Last Updated 3 ಏಪ್ರಿಲ್ 2021, 9:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಕ್ರಮ ಕೈಗೊಳ್ಳದ ಯಡಿಯೂರಪ್ಪ ಅವರು ಕೈಲಾಗದ ಸಿಎಂ ಎನಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿ ವಿರುದ್ಧ ಟ್ವೀಟ್‌ ಸಮರ ಮುಂದುವರಿಸಿರುವ ಕಾಂಗ್ರೆಸ್‌, ‘ಕೆ.ಎಸ್‌.ಈಶ್ವರಪ್ಪ ಅವರೇ ಗುಲಾಮರಂತೆ ಸಚಿವರಾಗಿರುವುದಕ್ಕಿಂತ, ರಾಜೀನಾಮೆ ಕೊಟ್ಟು ಸ್ವಾಭಿಮಾನ ಪ್ರದರ್ಶಿಸಿ’ ಎಂದು ಸವಾಲು ಹಾಕಿದೆ.

‘ಸಿಎಂ ಯಡಿಯೂರಪ್ಪ ಅವರೇ, ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳದೆ ಕೈಲಾಗದ ಸಿಎಂ ಎನಿಸಿಕೊಂಡಿದ್ದೀರಿ, ಈಶ್ವರಪ್ಪನವರನ್ನಾದರೂ ಸಂಪುಟದಿಂದ ಹೊರದಬ್ಬಿ ನಿಮ್ಮ ತಾಕತ್ತು ಪ್ರದರ್ಶಿಸಿ. ಇದಾಗುವುದಿಲ್ಲವೆಂದರೆ ನೆಟ್ಟಗೆ ಆಡಳಿತ ನಡೆಸಿಕೊಂಡು ಹೋಗಿ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ADVERTISEMENT

‘ಬಿಜೆಪಿ ಪಕ್ಷದ ಅಧ್ಯಕ್ಷ, ಉಸ್ತುವಾರಿ, ಕಾರ್ಯದರ್ಶಿ ಸರ್ಕಾರದ ಚಟುವಟಿಕೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದರೆ ಏನರ್ಥ?, ಬಿಜೆಪಿಯೊಳಗೆ ಕೆಜೆಪಿ ಇನ್ನೂ ಜೀವಂತವಾಗಿದೆ ಎಂದರ್ಥವೇ?, ಯತ್ನಾಳ್‌ರನ್ನು ನಿಯಂತ್ರಿಸದೆ ಮಜಾ ನೋಡಿಕೊಂಡು ಬಿಟ್ಟಿದ್ದು ಏಕೆಂದು ಈಗ ಸ್ಪಷ್ಟವಾಗುತ್ತಿದೆ ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನ ವೇಗ ಪಡೆದುಕೊಳ್ಳುತ್ತಿದೆ’ ಎಂದು ವ್ಯಂಗ್ಯವಾಡಿದೆ.

ಮತ್ತೊಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಪ್ರತಿ ಇವಿಎಂ ಯಂತ್ರ ಕೆಟ್ಟಾಗಲೂ ಅದು ಬಿಜೆಪಿ ಬಟನ್ ಪರವಾಗಿಯೇ ಕೆಲಸ ಮಾಡುತ್ತಿರುತ್ತದೆ. ಪ್ರತಿ ಬಾರಿ ಇವಿಎಂ ಸಾಗಿಸುವಾಗ ಸಿಕ್ಕಿಬೀಳುವ ವಾಹನ ಬಿಜೆಪಿಯದ್ದೇ ಆಗಿರುತ್ತದೆ. ಪ್ರತಿ ಬಾರಿ ಚುನಾವಣಾ ವಾಹನ ಕೆಟ್ಟು ನಿಂತಾಗಲೂ ಬಿಜೆಪಿ ವಾಹನವೇ ಸಹಾಯಕ್ಕೆ ಬರುತ್ತದೆ. ‘ಕಾಕತಾಳೀಯ’ ಎಂಬ ಪದವೂ ಕೂಡ ಒಂದು ಪಕ್ಷದ ಪರವಾಗಿರುವುದು ಕಾಕತಾಳಿಯವೇ’ ಎಂದು ಪ್ರಶ್ನಿಸಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.