ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾಗುತ್ತಿರುವ ಹಡಗಿಗೆ ಸಿದ್ದರಾಮಯ್ಯ ಅವರು ರಂಧ್ರ ಕೊರೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಡಗು ತೂತಾಗಿದೆ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ನೀವು ಮಾಡುತ್ತಿರುವುದಾದರೂ ಏನು?, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಗುತ್ತಿರುವ ಹಡಗಿಗೆ ನೀವು ರಂಧ್ರ ಕೊರೆಯುತ್ತಿರುವುದು ಯಾರಿಗೂ ತಿಳಿಯದ ವಿಚಾರವೇನಲ್ಲ’ ಎಂದು ಟೀಕಿಸಿದೆ.
‘ನೀವು (ಸಿದ್ದರಾಮಯ್ಯನವರೇ) ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಹಡಗಿನತ್ತ ಮೊದಲು ಗಮನಹರಿಸಿ’ ಎಂದು ಬಿಜೆಪಿ ಕಿಡಿಕಾರಿದೆ.
ಇದಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್, ‘ಜಗತ್ತು ನಿಮ್ಮ ಬೃಹನ್ನಾಟಕ ನೋಡುತ್ತಿದೆ. ಆದರೂ ಬೇರೆ ಕಡೆ ಬೆರಳು ತೋರಿಸುವ ನಿಮ್ಮ ಲಜ್ಜೆಗೇಡಿತನಕ್ಕೆ ಏನೆನ್ನಬೇಕು!. ಒಬ್ಬ ಯತ್ನಾಳ, ಮತ್ತೊಬ್ಬ ಈಶ್ವರಪ್ಪ ಅವರನ್ನು ಸಂಬಾಳಿಸಲಾಗದ ನಿಮ್ಮ ಹಡಗು ಅರ್ಧ ಮುಳುಗಿದೆ. ಉಪಚುನಾವಣೆ ಬಳಿಕ ಪೂರ್ತಿ ಮುಳುಗಲಿದೆ. ರಾಜ್ಯದ ಜನರು ಕಳೆದ ಬಾರಿಯೇ ನಿಮ್ಮ ಘನಂದಾರಿ ಆಡಳಿತವನ್ನು ನೋಡಿದ್ದಾರೆ’ ಎಂದು ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.