ADVERTISEMENT

ಕೋವಿಡ್‌ ಲಸಿಕೆ | ಕಾಂಗ್ರೆಸ್ ಸುಳ್ಳು ಹೇಳಿ ಜನರಲ್ಲಿ ಗೊಂದಲ ಸೃಷ್ಟಿಸಿದೆ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 9:42 IST
Last Updated 15 ಏಪ್ರಿಲ್ 2021, 9:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಲಸಿಕೆ ಕುರಿತು ಕಾಂಗ್ರೆಸ್‌ ಸುಳ್ಳು ಹೇಳುವ ಮೂಲಕ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಲಸಿಕೆ ವಿಚಾರವಾಗಿ ಟ್ವಿಟರ್‌ನಲ್ಲಿ ಕಾಂಗ್ರೆಸ್‌ ತಿರುಗೇಟು ಕೊಟ್ಟಿರುವ ಬಿಜೆಪಿ, ‘ಸಾರ್ವಜನಿಕರು ನಿರಾತಂಕವಾಗಿ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಇಲ್ಲದೆ ಜನರು ಹಿಂತಿರುಗಿದ ಒಂದೇ ಒಂದು ಉದಾಹರಣೆ ಎಲ್ಲೂ ದಾಖಲಾಗಿಲ್ಲ’ ಎಂದಿದೆ.

‘ಲಸಿಕೆ ಪಡೆದುಕೊಳ್ಳಿ ಎಂದು ಜನರಲ್ಲಿ ಧನಾತ್ಮಕ ಚಿಂತನೆ ತುಂಬಬೇಕಿದ್ದ ಕಾಂಗ್ರೆಸ್‌ ಸುಳ್ಳು ಹೇಳುವ ಮೂಲಕ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. ಕಾಂಗ್ರೆಸ್‌ನವರ ಸುಳ್ಳುಗಳಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ADVERTISEMENT

ಇದಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌, ‘ರಾಜ್ಯದಲ್ಲಿ ಲಸಿಕೆಗಳಿಗೆ ತೀವ್ರ ಕೊರತೆ ಉಂಟಾಗಿದೆ. ಆದರೆ, ಬಿಜೆಪಿ ಸರ್ಕಾರ ‘ಲಸಿಕೆ ಉತ್ಸವ’ ಎನ್ನುವ ಸುಳ್ಳುಗಳ ಭ್ರಮೆಯ ಉತ್ಸವ ನಡೆಸುತ್ತಿದೆ. ಜನರ ಮರಣದಲ್ಲೂ ಮಹೋತ್ಸವ ಆಚರಿಸಲು ಬಿಜೆಪಿಯಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ ಮಾತ್ರ ಸಾಧ್ಯ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಸೋಂಕಿತ ಸರ್ಕಾರ‌ಕ್ಕೆ ಇನ್ನೂ ಗಾಂಭೀರ್ಯತೆ ಬಂದಿಲ್ಲ’ ಎಂದು ಆರೋಪಿಸಿತ್ತು.

‘ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಎದುರಾಗಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಲಸಿಕೆಗಳ ಕೊರತೆ ನೀಗಿಸುವ ಬದಲು ‘ಟೀಕಾ ಉತ್ಸವ’ ಎನ್ನುವ ಬೂಟಾಟಿಕೆ ಆಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಲಸಿಕೆ ಕೊರತೆ ಇಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಸುಧಾಕರ್ ಅವರೇ ಲಸಿಕೆ ಕೊರತೆ ನೀಗಿಸಲು ಯಾವ ಕ್ರಮ ಕೈಗೊಂಡಿದ್ದೀರಿ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.