ADVERTISEMENT

ಸಿದ್ದರಾಮಯ್ಯ ಭಾಷಣ ನಿಲ್ಲಿಸುವಂತೆ ಮಾಡಿದ್ದೀರಾ, ನೀವು ಪಕ್ಷ ದ್ರೋಹಿಗಳು: ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2021, 14:29 IST
Last Updated 17 ನವೆಂಬರ್ 2021, 14:29 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌    

ಬೆಂಗಳೂರು: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾಷಣ ಮಾಡುವುದಕ್ಕೆ ಅಡ್ಡಿಪಡಿಸಿದ್ದೀರಾ.. ನೀವೆಲ್ಲ ಪಕ್ಷ ದ್ರೋಹಿಗಳು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕರ್ತರ ವರ್ತನೆಗೆ ಫುಲ್‌ ಗರಂ ಆಗಿದ್ದಾರೆ.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕೆ. ಅಬ್ದುಲ್ ಜಬ್ಬಾರ್ ನೇಮಕಗೊಂಡಿದ್ದು, ಮಂಗಳವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಶಾಸಕ ಜಮೀರ್ ಅಹಮ್ಮದ್ ಖಾನ್‌ ಅವರನ್ನು ಆಹ್ವಾನಿಸಿಲ್ಲ ಎಂದು ಅವರ ಬೆಂಬಲಿಗರು ಪಕ್ಷದ ಮುಖಂಡರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರ ನಡುವೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣ ಮಾಡಲು ಮುಂದಾದರು. ಆದರೆ, ಕಾರ್ಯಕರ್ತರು ಡಿಕೆ, ಡಿಕೆ.., ಜಮೀರ್‌ಗೆ ಜೈ ಎಂದು ಭಾವಚಿತ್ರಗಳನ್ನು ಹಿಡಿದು ಜೋರಾಗಿ ಘೋಷಣೆ ಕೂಗಿದರು. ಕಾರ್ಯಕರ್ತರನ್ನು ಸಮಾಧಾನ ಮಾಡಲು ಸಿದ್ದರಾಮಯ್ಯ ಪ್ರಯತ್ನಿಸಿದರೂ ಅದು ಪ್ರಯೋಜನವಾಗಲಿಲ್ಲ. ಇದರಿಂದಾಗಿ ಮುಜುಗರಕ್ಕೊಳಗಾದ ಅವರು ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದರು.

ADVERTISEMENT

ಮಧ್ಯಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಇದು ಕಾಂಗ್ರೆಸ್‌ ಸಭೆ ಗೂಂಡಾಗಿರಿ ಮಾಡುವವರನ್ನು ಆಚೆಗೆ ಹಾಕಿಸುತ್ತೇನೆ. ವ್ಯಕ್ತಿ ಪೂಜೆ, ಗುಂಪುಗಾರಿಕೆ ಮಾಡಿ ಪಕ್ಷಕ್ಕೆ ಹಾನಿ ಉಂಟು ಮಾಡುವವರು ನಮಗೆ ಬೇಡ. ನಮ್ಮಲ್ಲಿ ಪಕ್ಷ ಪೂಜೆಗಷ್ಟೇ ಅವಕಾಶ. ವಿರೋಧ ಪಕ್ಷದ ನಾಯಕರು (ಸಿದ್ದರಾಮಯ್ಯ) ಭಾಷಣ ಮಾಡುತ್ತಿದ್ದಾರೆ. ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದೀರಾ. ನೀವೆಲ್ಲ ಪಕ್ಷ ದ್ರೋಹಿಗಳು. ಈ ಬೂಟಾಟಿಕೆ ಎಲ್ಲ ಬಿಡಿ. ಅವರನ್ನು ಆಚೆಗೆ ಹಾಕಿ’ ಎಂದು ಕಾರ್ಯಕರ್ತರ ವರ್ತನೆ ಖಂಡಿಸಿ ಆಕ್ರೋಶ ಹೊರಹಾಕಿದರು.

ಈ ನಾಟಕೀಯ ಬೆಳವಣಿಗೆಯಿಂದಾಗಿ ರಾಜ್ಯ ಕಾಂಗ್ರೆಸ್‌ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.

ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಪರ್ಸಂಟೇಜ್‌ ರಾಜಕಾರಣ ನಡೆಸುತ್ತಿದ್ದಾರೆ ಎಂದು ಎಂ.ಎ. ಸಲೀಂ ಮತ್ತು ವಿ.ಎಸ್. ಉಗ್ರಪ್ಪ ಮಾತನಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.