ADVERTISEMENT

Karnataka Politics | ಪರೋಪಕಾರಕ್ಕಾಗಿ ಈ ಶರೀರ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 14:01 IST
Last Updated 11 ಜುಲೈ 2025, 14:01 IST
<div class="paragraphs"><p>ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌</p></div>

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

   

ಬೆಂಗಳೂರು: ‘ದೇವರು ವರ ಅಥವಾ ಶಾಪ ಕೊಡೋದಿಲ್ಲ, ಅವಕಾಶ ಕೊಡ್ತಾನೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಒಳ್ಳೆ ಹಣ್ಣು ಇರುವ ಮರಕ್ಕೇ ಜನ ಕಲ್ಲು ಹೊಡೆಯೋದು ಜಾಸ್ತಿ. ನನಗೆ ಶತ್ರುಗಳು ಬೇಡ. ಅಸೂಯೆಗೆ ಮದ್ದಿಲ್ಲ. ಈ ಶರೀರ ಇರುವುದೇ ಪರೋಪಕಾರಕ್ಕಾಗಿ. ನನಗೆ ಹಾರಗಳ ಭಾರ ಜಾಸ್ತಿ ಆಗಿದೆ. 29ನೇ ವಯಸ್ಸಿಗೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವನು ನಾನು. ಜೀವನದುದ್ದಕ್ಕೂ ಅನುಭವ ಸಾಕಷ್ಟು ಕಲಿಸಿದೆ...’

‘ಬೆಂಗಳೂರು ವಕೀಲರ ಸಂಘ’ದ (ಎಎಬಿ) ವತಿಯಿಂದ ಸಿಟಿ ಸಿವಿಲ್‌ ಕೋರ್ಟ್‌ ಆವರಣದ ವಕೀಲರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಶಾಂತಚಿತ್ತರಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಭಾಷಣದುದ್ದಕ್ಕೂ ಒಗಟು, ಪಾರಮಾರ್ಥ, ಸಂಸ್ಕೃತ ಸುಭಾಷಿತ ಮತ್ತು ಡಿವಿಜಿ ಅವರ ಕಗ್ಗಗಳ ಮಿಶ್ರಣವನ್ನು ವಕೀಲ ವೃಂದಕ್ಕೆ ಉಣಬಡಿಸಿದರು.  

ADVERTISEMENT

‘ಕೆಂಪೇಗೌಡ ಜಯಂತಿ ಆಚರಣೆ ಶುರು ಮಾಡಿದ್ದೇ ನಾನು. ಈ ಆಚರಣೆ ಬೆಂಗಳೂರಿಗೆ ಮಾತ್ರವಲ್ಲ. ರಾಜ್ಯಕ್ಕೂ ವಿಸ್ತರಣೆಯಾಗಬೇಕು. ಈ ನಗರ ಜ್ಞಾನ, ಸಂಪನ್ಮೂಲ ಮತ್ತು ಮಾನವ ಶಕ್ತಿಯನ್ನು ಹೊಂದಿದ, ದೇಶದಲ್ಲೇ ಅತ್ಯುತ್ತಮವಾದ ನಗರ. ಬೆಂಗಳೂರು ಇಂದು ಸಾಕಷ್ಟು ಬೆಳೆದಿದೆ. ಇಲ್ಲಿಗೆ ಬಂದ ಯಾರೂ ಕೂಡಾ ಇಲ್ಲಿಂದ ವಾಪಸು ಹೋಗುವುದಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಕೆಲಸ ಮಾಡುವಲ್ಲಿ ನನಗೆ ಅತೀವ ಆಸಕ್ತಿ ಇದೆ’ ಎಂದರು.

‘ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದ ಅವರು, ‘ಅಡ್ವೊಕೇಟ್ಸ್‌ ಅಕಾಡೆಮಿಗೆ ಬೆಂಗಳೂರಿನ ಹೊರಭಾಗದಲ್ಲಿ 20 ಕಿ.ಮೀ ವ್ಯಾಪ್ತಿಯಾಚೆಗೆ 10 ಎಕರೆ ಜಮೀನು ಕೊಡಿಸಲು ಕಂದಾಯ ಸಚಿವರ ಜೊತೆ ಮಾತನಾಡುತ್ತೇನೆ. ಎಎಬಿ ಉಪಯೋಗಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (ಜಿಬಿಎ) ₹5 ಕೋಟಿ ರೂಪಾಯಿ ಅನುದಾನ ನೀಡುತ್ತೇನೆ. ಅಂತೆಯೇ, ಪ್ರತಿ ವರ್ಷ ಇಬ್ಬರು ವಕೀಲರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಗುವುದು’ ಎಂದು ಘೋಷಿಸಿದರು. 

‍ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಪ್ರಾಧ್ಯಾಪಕ ಎಂ.ಕೃಷ್ಣೇಗೌಡ, ನಟಿ ಪ್ರೇಮಾ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್‌.ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ, ಖಜಾಂಚಿ ಪ್ರೇಮಾ ರವಿಶಂಕರ್‌, ಟಿ.ಅಂಜನಕುಮಾರ್ ಗೌಡ, ಎಸ್‌.ಎನ್.ರಾಕೇಶ್‌ ಸೇರಿದಂತೆ ಎಲ್ಲ ಘಟಕಗಳ ಪದಾಧಿಕಾರಿಗಳು ಹಿರಿ–ಕಿರಿಯ ವಕೀಲರು ಹಾಜರಿದ್ದರು.

‘ವಕೀಲರ ರಕ್ಷಣಾ ಕಾಯ್ದೆ ಅನುಷ್ಠಾನದ ರೂವಾರಿ’ ಎಂಬ ಅಭಿದಾನದೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರು ವಕೀಲರ ಸಂಘದ ವತಿಯಿಂದ ಶುಕ್ರವಾರ ಸಿಟಿ ಸಿವಿಲ್‌ ಕೋರ್ಟ್‌ನ ವಕೀಲರ ಸಭಾಭವನದಲ್ಲಿ, ಹಸು–ಕರುವಿನ ಕಾಮಧೇನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.