ADVERTISEMENT

ದಲಿತರನ್ನು ಕಟ್ಟಿ ಹಾಕಲು ಈಗಲೇ ರಣತಂತ್ರ ರೂಪಿಸಿದ ಸಿದ್ದು –ಡಿಕೆಶಿ: ಬಿಜೆಪಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2022, 8:26 IST
Last Updated 3 ಜೂನ್ 2022, 8:26 IST
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌    

ಬೆಂಗಳೂರು: ‘ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನವೇ ದಲಿತರನ್ನು ಕಟ್ಟಿ ಹಾಕಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಈಗಲೇ ರಣತಂತ್ರ ರೂಪಿಸಿದಂತಿದೆ’ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ನವ ಸಂಕಲ್ಪ ಶಿಬಿರದ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್‌ನ ನವ ಸಂಕಲ್ಪ ಶಿಬಿರಕ್ಕೆ ಅನೇಕ ನಾಯಕರು ಕೈಕೊಟ್ಟಿದ್ದಾರೆ. ಇದು ಪಕ್ಷದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿರುವುದನ್ನು ಸೂಚಿಸುತ್ತದೆ. ಈ ಬೆಂಕಿಯ ಕಾವಿನಿಂದ 2023 ಚುನಾವಣೆಯಲ್ಲಿ ಕಾಂಗ್ರೆಸ್‌ ಹೊತ್ತಿ ಉರಿಯುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ. #CongressMukthKarnataka ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿದೆ.

‘ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್‌ ಪಕ್ಷದ ಪರವಾಗಿ ವಕಾಲತ್ತು ಆರಂಭಿಸಿದ ಕೂಡಲೇ ಇತ್ತ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಮ್ಮ ವೈಮನಸ್ಸು ಮರೆಯುವ ಮಾತುಗಳನ್ನಾಡುತ್ತಿದ್ದಾರೆ. ಅತಂತ್ರವಾದಲ್ಲಿ ಖರ್ಗೆ ಮುಖ್ಯಮಂತ್ರಿಯಾಗುವ ಭಯವೇ?, ದಲಿತರನ್ನು ಕಟ್ಟಿ ಹಾಕಲು ಈಗಲೇ ರಣ ತಂತ್ರವೇ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿಎಂ ಇಬ್ರಾಹಿಂ ಮಾತುಗಳನ್ನು ಕಾಂಗ್ರೆಸ್‌ ನಾಯಕರು ನಿರ್ಲಕ್ಷಿಸಿದ್ದರು. ಇಂದು ಅದೇ ಇಬ್ರಾಹಿಂ ಮಾತಿಗೆ ಬೆಲೆಕೊಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಂಗ್ರೆಸ್‌ ಈಗ, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುತ್ತದೋ ಅಥವಾ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಮಾತನ್ನು ತಿರಸ್ಕರಿಸುತ್ತದೋ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.