
ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಸಂಕ್ರಾಂತಿ ನಂತರ ಪಕ್ಷ ಸಂಘಟನೆಯ ಚಟುವಟಿಕೆಗಳನ್ನು ಜೆಡಿಎಸ್ ಚುರುಕುಗೊಳಿಸಿದ್ದು, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೈಸೂರು ಭಾಗದ ಶಾಸಕರ ಮತ್ತು ಮುಖಂಡರ ಜತೆಗೆ ಸಭೆ ನಡೆಸಿದ್ದಾರೆ.
ದೇವೇಗೌಡ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಮೈಸೂರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ದೇವೇಗೌಡ ಅವರು ಈ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನದಲ್ಲಿ ಪಕ್ಷದ ಸಮಾವೇಶ ನಡೆಸುವ ಬಗ್ಗೆ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಪಡೆಯಲಾಗಿದೆ. ಸಮಾವೇಶವನ್ನು ಯಶಸ್ವಿಗೊಳಿಸುವ ಮತ್ತು ಪಕ್ಷ ಸಂಘಟನೆಯ ಸಾಧ್ಯತೆಗಳನ್ನು ಚರ್ಚಿಸಲಾಗಿದೆ. ಇನ್ನೂ ಹಲವು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
‘ಎಲ್ಲಿ ನಿಲ್ಲಿಸಿದರೂ ಸ್ಪರ್ಧಿಸುವೆ’: ಎಚ್.ಡಿ. ದೇವೇಗೌಡ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಾ.ರಾ.ಮಹೇಶ್ ಅವರು, ‘ಈ ಹಿಂದೆ ಜಿ.ಟಿ.ದೇವೇಗೌಡ ಅವರು ಪಕ್ಷದಿಂದ ದೂರ ಉಳಿದಾಗ, ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಮನೆಯ ಬಾಗಿಲು ಮುಚ್ಚಿದೆ ಎಂದಿದ್ದರು. ನಾವೆಲ್ಲರೂ ಹೋಗಿ ಜಿ.ಟಿ.ದೇವೇಗೌಡ ಅವರನ್ನು ವಾಪಸ್ ಕರೆತಂದಿದ್ದೆವು. ಈಗ ಅವರನ್ನು ವಾಪಸ್ ಕರೆತರುವ ಮನಸ್ಥಿತಿ ಯಲ್ಲಿ ಯಾರೂ ಇಲ್ಲ’ ಎಂದರು.
ಜಿ.ಟಿ.ದೇವೇಗೌಡ ಶಾಸಕರಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು
ಸ್ಪರ್ಧಿಸುತ್ತೀರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ವರಿಷ್ಠರು ಯಾವ ಕ್ಷೇತ್ರ ಸೂಚಿಸಿದರೂ, ಅಲ್ಲಿಂದ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.